ಬೆಳಗಾವಿ: ಕಳೆದುಕೊಂಡ ಸಚಿವ ಸ್ಥಾನವನ್ನು ಮರಳಿ ಪಡೆಯುವುದಕ್ಕೆ ಕೆ ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಹರಸಾಹಸವನ್ನೇ ಪಟ್ಟರು. ಚಳಿಗಾಲದ ಅಧಿವೇಶನಕ್ಕೂ ಚಕ್ಕರ್ ಹಾಕಿದರು. ಬಳಿಕ ಸಿಎಂ ಬೊಮ್ಮಾಯಿ ಅವರು ಸಚಿವ ಸ್ಥಾನ ನೀಡುವ ಭರವಸೆ ನೀಡಿದ ಬಳಿಕ, ಚಳಿಗಾಲದ ಅಧಿವೇಶನಕ್ಕೆ ಹಾಜರಾಗಿದ್ದಾರೆ.
ಸುವರ್ಣಸೌಧದ ಬಳಿ ಮಾತನಾಡಿದ ಈಶ್ವರಪ್ಪ, ಸಿಎಂ ಬೊಮ್ಮಾಯಿ ಅವರ ಮೇಲೆ ನಂಬಿಕೆಯಿಟ್ಟು ಅಧಿವೇಶನಕ್ಕೆ ಹಾಜರಾಗುತ್ತಿದ್ದೇವೆ. ಬಿಜೆಪಿ ಯಾವಾಗಲೂ ನಂಬಿಕೆ ಮತ್ತು ವಿಶ್ವಾಸವನ್ನಿಟ್ಟುಕೊಂಡಿರುವ ಪಕ್ಷ. ಬೊಮ್ಮಾಯಿ ಅವರ ಮೇಲಿನ ನಂಬಿಕೆಯಿದ್ದ ನಾನು ಮತ್ತು ರಮೇಶ್ ಅಧಿವೇಶನಕ್ಕೆ ಹಾಜರಾಗುತ್ತಿದ್ದೇವೆ. ನಾವಿಬ್ಬರು ಎರಡು ದಿನ ಅಧಿವೇಶನವನ್ನು ಬಾಯ್ಕಾಟ್ ಮಾಡಿದ ಉದ್ದೇಶವೇನೆಂದರೆ ನಮ್ಮಿಬ್ಬರಿಗೂ ಕ್ಲೀನ್ ಚಿಟ್ ಸಿಕ್ಕಾಗಿದೆ. ಆದರೂ ಯಾಕೆ ಸಂಪುಟಕ್ಕೆ ತೆಗೆದುಕೊಂಡಿಲ್ಲ ಅಂತ ಜನ ಕೇಳುತ್ತಿದ್ದಾರೆ. ಜನರ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿಲ್ಲ ಎಂದಿದ್ದಾರೆ.
3-4 ತಿಂಗಳಲ್ಲಿ ಕಡಿದು ಗುಡ್ಡೆ ಹಾಕುವುದು ಏನು ಇಲ್ಲ ಎಂಬುದು ನನಗೂ ರಮೇಶ್ ಗೂ ಚೆನ್ನಾಗಿಯೇ ಗೊತ್ತು. ಸಚಿವ ಸ್ಥಾನದ ಬಗ್ಗೆ ಸಿಎಂ ಬಳಿ ಮಾತನಾಡಿದ್ದೇವೆ. ನನ್ನದು ಮತ್ತು ರಮೇಶ್ ದು ಈಗಾಗಲೇ ಆಗಿದೆ. ಉಳಿದ 4 ಜನರ ಪಟ್ಟಿಯನ್ನು ತೆಗೆದುಕೊಂಡು ಸಿಎಂ ಸೋಮವಾರ ದೆಹಲಿಗೆ ಹೋಗುತ್ತಾರೆ. ಇದು ಪ್ರೆಸ್ಟೀಜ್ ಪ್ರಶ್ನೆ ಅಷ್ಟೇ ಎಂದಿದ್ದಾರೆ.