Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಡಿಕೆಶಿ ಹೊಸ ಸಂಪುಟ:ಯಾರಿಗೆ ಸಚಿವ ಸ್ಥಾನ? ಯಾರಿಗೆ ಕೋಕ್? ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ತೀವ್ರ ಚರ್ಚೆ

---Advertisement---

ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆಯ ರಾಜಕೀಯ ಬೆಳವಣಿಗೆಗಳ ಬೆನ್ನಲ್ಲೇ, ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವ ಡಿ‌ ಕೆ ಶಿವಕುಮಾರ್  ಅವರ ಹೊಸ ಸಚಿವ ಸಂಪುಟದ ಕುರಿತು ಕಾಂಗ್ರೆಸ್ ವಲಯದಲ್ಲಿ ಭಾರೀ ಕಸರತ್ತು ಆರಂಭವಾಗಿದೆ.ಹೊಸ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಲಿದೆ? ಯಾರನ್ನು ಕೈಬಿಡಲಾಗುತ್ತದೆ? ಯಾವ ಸಮುದಾಯಕ್ಕೆ ಎಷ್ಟು ಪ್ರಾತಿನಿಧ್ಯ ಸಿಗಲಿದೆ? ಎಂಬ ಚರ್ಚೆಗಳು ದೆಹಲಿ ಹೈಕಮಾಂಡ್ ಮಟ್ಟದಲ್ಲೇ ತೀವ್ರಗೊಂಡಿವೆ.

ವಿಶೇಷವಾಗಿ ಸಿದ್ದರಾಮಯ್ಯ ಬಣದ ನಾಯಕರನ್ನು ಸಮಾಧಾನಪಡಿಸುವುದು, ಅಹಿಂದ ಮತಬ್ಯಾಂಕ್‌ ಕಾಪಾಡುವುದು, ಜೊತೆಗೆ ಯುವ ನಾಯಕರಿಗೆ ಅವಕಾಶ ಕಲ್ಪಿಸುವುದು ಡಿಕೆಶಿ ಎದುರಿನ ದೊಡ್ಡ ರಾಜಕೀಯ ಸವಾಲಾಗಿದೆ.

ರಾಜಕೀಯ ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಅವರ ಆಪ್ತ ವಲಯದ ಕೆಲವು ನಾಯಕರಿಗೆ ಈ ಬಾರಿ ಪ್ರಭಾವಿ ಖಾತೆಗಳು ಸಿಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಎನ್ ಚೆಲುವಸ್ವಾಮಿ ಅವರಿಗೆ ಹಳೆ ಮೈಸೂರು ಭಾಗದ ಪ್ರಭಾವಿ ನಾಯಕತ್ವದ ಹಿನ್ನೆಲೆಯಲ್ಲಿ ಮತ್ತಷ್ಟು ಬಲಿಷ್ಠ ಖಾತೆ ನೀಡುವ ಸಾಧ್ಯತೆ ಇದೆ. ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಮಹಿಳಾ ಕೋಟಾ ಹಾಗೂ ಉತ್ತರ ಕರ್ನಾಟಕದ ಪ್ರಭಾವಿ ನಾಯಕತ್ವದ ಆಧಾರದ ಮೇಲೆ ಮಹತ್ವದ ಜವಾಬ್ದಾರಿ ಸಿಗಬಹುದು.

ಕೃಷ್ಣ ಬ್ಯಾರೆ ಗೌಡ ಆಡಳಿತಾತ್ಮಕ ಅನುಭವ ಮತ್ತು ಬೆಂಗಳೂರಿನ ರಾಜಕೀಯ ಸಮೀಕರಣದ ಕಾರಣದಿಂದ ಡಿಕೆಶಿ ಸಂಪುಟದಲ್ಲಿ ಪ್ರಮುಖ ಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆ ಇದೆ.
ಬೆಂಗಳೂರು ಗ್ರಾಮಾಂತರ ಹಾಗೂ ಒಕ್ಕಲಿಗ ಸಮುದಾಯದ ಲೆಕ್ಕಾಚಾರದಲ್ಲಿ ಎಚ್ ಸಿ ಬಾಲಕೃಷ್ಣ ಅಥವಾ ಶರತ್ ಬಚ್ಚೆಗೌಡ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಪಕ್ಷದಲ್ಲಿ ಅಸಮಾಧಾನ ಸ್ಫೋಟಿಸದಂತೆ ನೋಡಿಕೊಳ್ಳಲು ಸಿದ್ದರಾಮಯ್ಯ ಆಪ್ತ ವಲಯದ ಕೆಲ ಹಿರಿಯ ನಾಯಕರನ್ನು ಸಂಪುಟದಲ್ಲಿ ಮುಂದುವರಿಸುವುದು ಅನಿವಾರ್ಯವಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಜಿ‌ ಪರಮೇಶ್ಚರ್ ಅವರಿಗೆ ದಲಿತ ಸಮುದಾಯದ ಹಿರಿಯ ನಾಯಕತ್ವದ ಹಿನ್ನೆಲೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಕುರಿತೂ ಚರ್ಚೆ ನಡೆದಿದೆ ಎನ್ನಲಾಗಿದೆ.
ಕೆ ಜೆ ಜಾರ್ಜ್ ಅವರಿಗೆ ಅಲ್ಪಸಂಖ್ಯಾತ ಕೋಟಾದಡಿ ಸ್ಥಾನ ಭದ್ರವಾಗಿದೆ ಎನ್ನಲಾಗುತ್ತಿದೆ.

ಎಚ್ ಕೆ ಪಾಟೀಲ್ ಉತ್ತರ ಕರ್ನಾಟಕದ ಹಿರಿಯ ಲಿಂಗಾಯತ ನಾಯಕತ್ವದ ಕಾರಣದಿಂದ ಸಂಪುಟದಲ್ಲಿ ಮುಂದುವರಿಯುವ ಸಾಧ್ಯತೆ ಇದೆ. ಸತೀಶ್ ಜಾರ್ಕಿಹೊಳಿ ಅವರನ್ನು ಕೈಬಿಡುವುದು ಬೆಳಗಾವಿ ರಾಜಕೀಯ ಮತ್ತು ಪರಿಶಿಷ್ಟ ಪಂಗಡ ಮತಬ್ಯಾಂಕ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಹೈಕಮಾಂಡ್ ಎಚ್ಚರಿಕೆಯಿಂದ ನಡೆದುಕೊಳ್ಳುತ್ತಿದೆ.

ಈ ಬಾರಿ ಕಾರ್ಯಕ್ಷಮತೆ ಇಲ್ಲದ ಕೆಲ ಹಿರಿಯ ಸಚಿವರಿಗೆ ಕೋಕ್ ನೀಡಿ, ಹೊಸ ತಲೆಮಾರಿನ ನಾಯಕರಿಗೆ ಅವಕಾಶ ನೀಡುವ ತಂತ್ರ ಕಾಂಗ್ರೆಸ್ ರೂಪಿಸುತ್ತಿದೆ ಎನ್ನಲಾಗುತ್ತಿದೆ.ಪ್ರದೀಪ್ ಈಶ್ವರ್ ಅವರಿಗೆ ಯುವ ನಾಯಕತ್ವದ ಪ್ರತಿನಿಧಿಯಾಗಿ ಅವಕಾಶ ಸಿಗುವ ಸಾಧ್ಯತೆ ಇದೆ. ಯುವಜನ ಸೇವೆ ಅಥವಾ ಸಣ್ಣ ಇಲಾಖೆಯ ಜವಾಬ್ದಾರಿ ನೀಡುವ ಚರ್ಚೆ ನಡೆದಿದೆ.ರಿಜವಾನ್ ಅರ್ಶದ್ ಹೆಸರು ಕೂಡ ಮುಸ್ಲಿಂ ಯುವ ನಾಯಕತ್ವದ ಪರಿಗಣನೆಯಲ್ಲಿ ಕೇಳಿಬರುತ್ತಿದೆ.

ಜಾತಿ-ಪ್ರಾದೇಶಿಕ ಸಮತೋಲನವೇ ಡಿಕೆಶಿಗೆ ದೊಡ್ಡ ಪರೀಕ್ಷೆ
ಹೊಸ ಸಚಿವ ಸಂಪುಟದಲ್ಲಿ:
ಒಕ್ಕಲಿಗ
ಲಿಂಗಾಯತ
ದಲಿತ
ಅಲ್ಪಸಂಖ್ಯಾತ
ಕುರುಬ
ಉತ್ತರ ಕರ್ನಾಟಕ
ಕಲ್ಯಾಣ ಕರ್ನಾಟಕ
ಹಳೆ ಮೈಸೂರು
ಈ ಎಲ್ಲಾ ಭಾಗ ಮತ್ತು ಸಮುದಾಯಗಳ ಸಮತೋಲನ ಕಾಪಾಡುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.
ಇದೀಗ ಡಿಕೆಶಿ ಸಂಪುಟದ ಅಂತಿಮ ಪಟ್ಟಿಗೆ ದೆಹಲಿಯಲ್ಲಿ ಕೊನೆಯ ಹಂತದ ಚರ್ಚೆಗಳು ನಡೆಯುತ್ತಿದ್ದು, ಪ್ರಮಾಣವಚನ ಸಮಾರಂಭಕ್ಕೂ ಮುನ್ನವೇ ಸಂಪೂರ್ಣ ಚಿತ್ರಣ ಸ್ಪಷ್ಟವಾಗುವ ಸಾಧ್ಯತೆ ಇದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now