ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸ್ಥಾನ ಕುರಿತ ಚರ್ಚೆ ಮತ್ತೆ ತೀವ್ರಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಹೇಳಿಕೆ ಹೊಸ ಸಂಚಲನಕ್ಕೆ ಕಾರಣವಾಗಿದೆ. ಹೈಕಮಾಂಡ್ ತೀರ್ಮಾನ ಮಾಡಿದಾಗಲೇ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ವಿರೋಧ ಪಕ್ಷದ ನಾಯಕರು ಸಿಎಂ ಕುರ್ಚಿ ವಿಚಾರವನ್ನು ಎತ್ತಿಕೊಂಡಾಗ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, “ನಮ್ಮದು ಹೈಕಮಾಂಡ್ ಆಧಾರಿತ ಪಕ್ಷ. ಹೈಕಮಾಂಡ್ ಸೂಚಿಸಿದರೆ ನಾನು ಸಿಎಂ ಸ್ಥಾನವನ್ನು ಬಿಡುತ್ತೇನೆ. ಆ ಸಮಯದಲ್ಲಿ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ” ಎಂದು ಹೇಳಿದರು.
ಚರ್ಚೆ ವೇಳೆ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರನ್ನೂ ಕಿಚಾಯಿಸಿದ್ದು, “ಅಶೋಕ್, ನಿಮಗೆ ಸಿಎಂ ಆಗುವ ಆಸೆ ಇಲ್ಲವೇ?” ಎಂದು ಪ್ರಶ್ನಿಸಿದರು. ಇದಕ್ಕೆ ಆರ್. ಅಶೋಕ್ ನಗುತ್ತಲೇ ಪ್ರತಿಕ್ರಿಯಿಸಿದರೆ, “ಬಿಜೆಪಿಯಲ್ಲಿ ಯಾರಾದರೂ ಸಿಎಂ ಆಗಲಿ – ಅರವಿಂದ ಬೆಲ್ಲದ ಆಗಲಿ, ಅಶ್ವತ್ ನಾರಾಯಣ ಆಗಲಿ ಸಂತೋಷವೇ” ಎಂದು ಹೇಳಿದರು. ಇದೇ ವೇಳೆ ವಿಜಯೇಂದ್ರ ಅವರನ್ನು ಸಿಎಂ ಆಗಲು ಬಿಡುವುದಿಲ್ಲ ಎಂದು ಹಾಸ್ಯವಾಗಿ ಟೀಕಿಸಿದರು.ಇದಕ್ಕೆ ಪ್ರತಿಯಾಗಿ ಬಿಜೆಪಿ ಶಾಸಕ ವಿ. ಸುನೀಲ್ ಕುಮಾರ್, “ನೀವು ಬಿಜೆಪಿಯವರ ಬಗ್ಗೆ ಹೇಳಿದ್ರಿ, ಡಿ.ಕೆ. ಶಿವಕುಮಾರ್ ಬಗ್ಗೆ ಸ್ಪಷ್ಟವಾಗಿ ಹೇಳಲಿಲ್ಲ” ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಿಎಂ, “ಹೈಕಮಾಂಡ್ ಯಾವಾಗ ತೀರ್ಮಾನ ಮಾಡುತ್ತದೆಯೋ ಆಗ ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಮ್ಮ ಪಕ್ಷದಲ್ಲಿ 224 ಶಾಸಕರು ಕೂಡ ಸಿಎಂ ಆಗುವ ಅರ್ಹತೆ ಹೊಂದಿದ್ದಾರೆ” ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಎಂ.ಬಿ. ಪಾಟೀಲ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ ಸೇರಿದಂತೆ ಹಲವರಿಗೆ ಮುಖ್ಯಮಂತ್ರಿ ಆಗುವ ಅರ್ಹತೆ ಇದೆ ಎಂದು ಹೇಳಿದ ಸಿದ್ದರಾಮಯ್ಯ, ಅಂತಿಮ ತೀರ್ಮಾನ ಹೈಕಮಾಂಡ್ ಕೈಯಲ್ಲೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೆ ಸಮಕಾಲದಲ್ಲಿ, ವಿಧಾನಸೌಧದಲ್ಲಿ ಶಾಸಕರ ಫೋಟೋ ಶೂಟ್ ನಡೆದಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ಸಾಮಾನ್ಯವಾಗಿ ಸರ್ಕಾರದ ಅವಧಿ ಅಂತ್ಯಕ್ಕೆ ಸಮೀಪಿಸಿದಾಗ ನಡೆಯುವ ಫೋಟೋ ಶೂಟ್ ಈ ಬಾರಿ ಎರಡು ವರ್ಷ ಬಾಕಿ ಇರುವಾಗಲೇ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.ಕೆಲವರು ಇದನ್ನು ಮುಖ್ಯಮಂತ್ರಿ ಬದಲಾವಣೆಯ ಮುನ್ಸೂಚನೆ ಎಂದು ವಿಶ್ಲೇಷಿಸುತ್ತಿದ್ದರೆ, ಮತ್ತೊಬ್ಬರು ಸಂಪುಟ ಪುನರ್‌ರಚನೆಯ ಭಾಗವಾಗಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ, ಸಿಎಂ ಕುರ್ಚಿ ವಿಚಾರ ರಾಜ್ಯ ರಾಜಕೀಯದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ.
















