ಸುದ್ದಿಒನ್, ಚಿತ್ರದುರ್ಗ, ಜುಲೈ. 13 : ಮಾಜಿ ರಾಜ್ಯಸಭಾ ಸದಸ್ಯರಾದ ದಿವಂಗತ ಶ್ರೀ ಹೆಚ್. ಹನುಮಂತಪ್ಪ ಅವರ ಅಂತ್ಯಕ್ರಿಯೆ ಹಾಗೂ ಅಂತಿಮ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಹಾಗೂ ಉಪ ಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ್ ಅವರು ಇಂದು ಅಂದರೆ ಜುಲೈ 13ರ ಸೋಮವಾರದಂದು ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಬಿ.ಎಸ್. ಶ್ರೀಧರ್ ಮತ್ತು ಉಪ ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಪ್ರತ್ಯೇಕ ಅಧಿಕೃತ ಪ್ರವಾಸ ಪಟ್ಟಿಗಳು ಬಿಡುಗಡೆಯಾಗಿವೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅವರು ಮಧ್ಯಾಹ್ನ 01:30ಕ್ಕೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಹೊರಟು, ಮಧ್ಯಾಹ್ನ 02:30ರ ವೇಳೆಗೆ ಚಿತ್ರದುರ್ಗ ತಾಲೂಕಿನ ಶ್ರೀ ಮುರುಘಾಮಠದ ಆವರಣದಲ್ಲಿರುವ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲಾ ಹೆಲಿಪ್ಯಾಡ್ ಗೆ ತಲುಪಲಿದ್ದಾರೆ. ಅಲ್ಲಿಂದ ನೇರವಾಗಿ ಚಿತ್ರದುರ್ಗ ಪಟ್ಟಣದಲ್ಲಿ ನಡೆಯಲಿರುವ ಮಾಜಿ ರಾಜ್ಯಸಭಾ ಸದಸ್ಯರಾದ ದಿ|| ಶ್ರೀ ಹೆಚ್. ಹನುಮಂತಪ್ಪ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ತರುವಾಯ ಸಂಜೆ 04:00 ಗಂಟೆಗೆ ಚಿತ್ರದುರ್ಗದ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಮೂಲಕ ವಾಪಸ್ ಪ್ರಯಾಣ ಬೆಳೆಸಿ, ಸಂಜೆ 05:00 ಗಂಟೆಗೆ ಬೆಂಗಳೂರಿನ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಬಂದು ತಲುಪಲಿದ್ದಾರೆ.
ಮತ್ತೊಂದೆಡೆ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ರಸ್ತೆ ಮಾರ್ಗದ ಮೂಲಕ ತುಮಕೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಬೆಳಿಗ್ಗೆ 09:00 ಗಂಟೆಗೆ ಬೆಂಗಳೂರಿನಿಂದ ರಸ್ತೆ ಮೂಲಕ ಹೊರಡುವ ಅವರು ಬೆಳಿಗ್ಗೆ 10:30ಕ್ಕೆ ತುಮಕೂರು ತಲುಪಲಿದ್ದಾರೆ. ಅಲ್ಲಿ ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ ತುಮಕೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್ ಆವರಣದಲ್ಲಿ ಘನತೆವೆತ್ತ ರಾಜ್ಯಪಾಲರೊಂದಿಗೆ ವಿವಿಧ ಕಟ್ಟಡಗಳ ಲೋಕಾರ್ಪಣೆ ಹಾಗೂ ವಿವಿಧ ಕಾಮಗಾರಿಗಳ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನಂತರ ಮಧ್ಯಾಹ್ನ 02:00 ಗಂಟೆಗೆ ತುಮಕೂರಿನಿಂದ ರಸ್ತೆ ಮೂಲಕ ಹೊರಟು ಮಧ್ಯಾಹ್ನ 03:30ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಚಿತ್ರದುರ್ಗದ ನೆಹರು ನಗರದಲ್ಲಿ ದೈವಾಧೀನರಾಗಿರುವ ಮಾಜಿ ರಾಜ್ಯಸಭಾ ಸದಸ್ಯರಾದ ಶ್ರೀ ಹೆಚ್. ಹನುಮಂತಪ್ಪ ಅವರ ಅಂತಿಮ ದರ್ಶನ ಪಡೆದು, ಸಂಜೆ 04:00 ಗಂಟೆಗೆ ಅಲ್ಲಿಂದ ರಸ್ತೆ ಮೂಲಕವೇ ನಿರ್ಗಮಿಸಿ ರಾತ್ರಿ 07:00 ಗಂಟೆಗೆ ಬೆಂಗಳೂರಿನ ಕೇಂದ್ರಸ್ಥಾನಕ್ಕೆ ವಾಪಸ್ ಆಗಲಿದ್ದಾರೆ.
ರಾಜ್ಯದ ಇಬ್ಬರು ಪ್ರಮುಖ ಗಣ್ಯರ ಭೇಟಿಯ ಹಿನ್ನೆಲೆಯಲ್ಲಿ ಬೆಂಗಳೂರು, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಗತ್ಯ ಭದ್ರತೆ, ಶಿಷ್ಟಾಚಾರ ಮತ್ತು ಹೆಲಿಪ್ಯಾಡ್ ಸೇರಿದಂತೆ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಜಂಟಿ ಕಾರ್ಯದರ್ಶಿಗಳು ಅಧಿಕೃತ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








