ಸುದ್ದಿಒನ್, ಚಿತ್ರದುರ್ಗ, ಜುಲೈ. 13 : ಜಿಲ್ಲೆಯ ಹೊಳಲ್ಕೆರೆ ಕಣಿವೆ ಸಮೀಪ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಚಿತ್ರದುರ್ಗ ನಗರದ ಸಿದ್ವಿ ಮೋಟಾರ್ಸ್ ಮಾಲೀಕರಾದ ಲೋಹಿತ್ ಪ್ರಸಾದ್ ಮತ್ತು ಅವರ ಪತ್ನಿ ನಿತ್ಯಶ್ರೀ ನಿಧನರಾಗಿದ್ದಾರೆ.
ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಬರುವಾಗ ಹೊಳಲ್ಕೆರೆ ಸಮೀಪದ ಕಣಿವೆ ಬಳಿ ರಾತ್ರಿ 12 ಗಂಟೆ ಸುಮಾರಿಗೆ ಇವರಿದ್ದ ಕಾರು ಎದುರುಗಡೆ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಈ ಘಟನೆ ನಡೆದಿದೆ. ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯ ನಿವಾಸಿ, ಮಾರುತಿ ಗ್ಯಾಸ್ ಮಾಲೀಕರಾದ ಪ್ರಭು ಪ್ರಸಾದ್ ಅವರ ಪುತ್ರ ಲೋಹಿತ್ ಪ್ರಸಾದ್ (ಸಿದ್ವಿ ಮೋಟಾರ್ಸ್ ಮಾಲೀಕರು) ಮತ್ತು ಅವರ ಪತ್ನಿ ನಿತ್ಯಶ್ರೀ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ಹೊಳಲ್ಕೆರೆ ಕಣಿವೆ ಬಳಿ ಭೀಕರ ಅಪಘಾತವಾಗಿದೆ ಎನ್ನಲಾಗಿದ್ದು, ಅಪಘಾತದ ತೀವ್ರತೆಗೆ ದಂಪತಿಗಳಿಬ್ಬರೂ ಕೊನೆಯುಸಿರೆಳೆದಿದ್ದಾರೆ. ಪ್ರಭು ಪ್ರಸಾದ್ ಅವರ ಮನೆಯಲ್ಲಿ ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆ ವರೆಗೆ ಅಂತಿಮ ದರ್ಶನ ನಡೆಯಲಿದ್ದು, ಬಳಿಕ ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಬಳಿಯ ಸೂರನಹಳ್ಳಿಯ ಅವರ ತೋಟದಲ್ಲಿ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ.











