ನವದೆಹಲಿ: ಗಣರಾಜ್ಯೋತ್ಸವದ ಅಂಗವಾಗಿ ದೆಹಲಿಯ ಪರೇಡ್ ನಲ್ಲಿ ಎಲ್ಲಾ ರಾಜ್ಯಗಳ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಆ ರಾಜ್ಯದ ಸಂಸ್ಕೃತಿ, ವಿಶೇಷತೆಯನ್ನು ಸಾರುವಂತ ಸ್ತಬ್ಧ ಚಿತ್ರವಾಗಿರುತ್ತದೆ. ಆದರೆ ಈ ಬಾರಿ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಅವಕಾಶವನ್ನು ನಿರಾಕರಿಸಲಾಗಿದೆ. ಇದು ಸಹಜವಾಗಿಯೇ ಕನ್ನಡಿಗರ ಬೇಸರಕ್ಕೆ ಕಾರಣವಾಗಿದೆ. ಯಾಕೆ ನುರಾಜರಣೆ ಮಾಡಲಾಗಿದೆ ಎಂಬುದನ್ನು ನೋಡೆಲ್ ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ನೋಡೆಲ್ ಅಧಿಕಾರಿ ಸಿ ಆರ್ ನವೀನ್, ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕಳೆದ ಎಂಟು ವರ್ಷಗಳಲ್ಲಿ, ಭಾಗವಹಿಸುವುದಕ್ಕೆ ಯಾವ ರಾಜ್ಯಕ್ಕೆ ಅವಕಾಶ ಸಿಕ್ಕಿರುವುದಿಲ್ಲ ಹಾಗೂ ಅತಿ ಕಡಿಮೆ ಸಮಯ ಭಾಗವಹಿಸಿರುವ ಟ್ಯಾಬ್ಲೋಗಳಿಗೆ ಈ ಬಾರಿ ಅವಕಾಶ ನೀಡುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಹೀಗಾಗಿ ಕರ್ನಾಟಕದ ಟ್ಯಾಬ್ಲೋಗೆ ಅವಕಾಶ ನಿರಾಕರಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಈ ಬಾರಿ ಕರ್ನಾಟಕ ಸ್ತಬ್ಧ ಚಿತ್ರಕ್ಕೆ ದೆಹಲಿಯ ಗಣರಾಜ್ಯೋತ್ಸವದಲ್ಲಿ ಅವಕಾಶ ನಿರಾಕರಿಸಿರುವುದಕ್ಕಾಗಿ ವಿಪಕ್ಷಗಳು ಆಡಳಿತ ಪಕ್ಷದ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಮೇಲೆ ಸ್ವಲ್ಪವೂ ಗೌರವ ಇಲ್ಲ ಅವರಿಗೆ ಎಂದು ಕಿಡಿಕಾರಿದ್ದಾರೆ.