ದಾವಣಗೆರೆ | ಮಾಜಿ ಸಚಿವೆ ನಾಗಮ್ಮ ಕೇಶವ ಮೂರ್ತಿ ಇನ್ನಿಲ್ಲ

1 Min Read

ಸುದ್ದಿಒನ್, ದಾವಣಗೆರೆ, ಮಾರ್ಚ್. 16 : ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ವಿಧಿವಶರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಶನಿವಾರ ಸಂಜೆ ವಿಧಿವಶರಾಗಿದ್ದಾರೆ. ನಾಗಮ್ಮ ಕೇಶವಮೂರ್ತಿ ಅವರಿಗೆ 90 ವರ್ಷ ವಯಸ್ಸಾಗಿತ್ತು. ನಾಗಮ್ಮ ಅವರ ನಿಧನದಿಂದ ಕುಟುಂಬಸ್ಥರು ದುಃಖದಲ್ಲಿದ್ದಾರೆ. ಪುತ್ರ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ನಾಗಮ್ಮ ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು. ಪಕ್ಷದಲ್ಲಿ ರಾಜ್ಯ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದರು. ಅಷ್ಟೇ ಅಲ್ಲ ಪ್ರಧಾನ ಕಾರ್ಯದರ್ಶಿಯಾಗಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಣೆ ಮಾಡಿದ್ದರು. ರಾಜಕೀಯ ಜೀವನ ಹೊರತು ಪಡಿಸಿ, ಸಮಾಜ ಸೇವೆಯನ್ನು ಮಾಡುತ್ತಿದ್ದರು. ಅದರಲ್ಲಿ ವನಿತಾ ಸಮಾಜ ಸಂಘ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಮೂಲಕ ಹಲವು ಸಮಾಜಸೇವೆಗಳನ್ನು ಮಾಡಿದ್ದರು.

ನಾಗಮ್ಮ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವೆಯಾಗಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ, ವಿಧಾನಸಭಾಪತಿಯಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ನಾಗಮ್ಮ ಕೇಶವ ಮೂರ್ತಿ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದರು. ಒಂದನೇ ತರಗತಿಯಿಂದ ನಾಲ್ಕನೇ ತರಗತಿಯವರೆಗೂ ಕನ್ನಡ ಕಡ್ಡಾಯ ಮಾಡಿದ್ದು ನಾಗಮ್ಮ ಅವರ ಕಾಲದಲ್ಲಿಯೇ. ಅಷ್ಟೇ ಅಲ್ಲ ಅವರ ಸೇವಾವಧಿಯಲ್ಲಿ ಪ್ರಾಥಮಿಕ ಶಾಲಾ ಹಂತದಲ್ಲಿ ಬಾಲಕಿಯರಿಗೆ ಶೇ. 50ರಷ್ಟು ಮೀಸಲಾತಿ ನೀಎಲು ಕ್ರಮವಹಿಸಿದ್ದರು. ರಾಜ್ಯ ಮಟ್ಟದ ಹಾಗೂ ವಲಯ ಮಟ್ಟದಲ್ಲಿ ಹತ್ತಾರು ಬೋಧಕ ಮಂಡಳಿಯ ಸಲಹೆಗಾರರಾಗಿದ್ದರು. ನಾಗಮ್ಮ ಕೇಶವಮೂರ್ತಿ ಅವರ ನಿಧನಕ್ಕೆ ರಾಜಕೀಯ ಗಣ್ಯರು, ಆಪ್ತರು ಸಂತಾಪ ಸೂಚಿಸಿದ್ದಾರೆ. ದುಃಖತಪ್ತರಾಗಿರುವ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲೆಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *