ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣದಲ್ಲಿ ಇಡೀ ಸಮಾಜವೇ ತಲೆತಗ್ಗಿಸುವಂತಹ ಅತ್ಯಂತ ಅಮಾನುಷ ಹಾಗೂ ಘೋರ ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಪತಿಯೊಂದಿಗೆ ಜಗಳವಾಡಿ ನೊಂದು ತಾಯಿಯ ಮನೆಗೆ ತೆರಳುತ್ತಿದ್ದ ಅಸಹಾಯಕ ಒಂಟಿ ಮಹಿಳೆಯನ್ನೇ ಗುರಿಯಾಗಿಸಿಕೊಂಡು ದುಷ್ಕರ್ಮಿಗಳು ತಮ್ಮ ವಿಕೃತ ಕಾಮವನ್ನು ತೀರಿಸಿಕೊಂಡಿದ್ದಾರೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ 10 ಮಂದಿ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.
ಕಳೆದ ಜೂನ್ 3ರಂದು ತಡರಾತ್ರಿ ಈ ಭೀಕರ ಕೃತ್ಯ ನಡೆದಿದೆ. ಸಂತ್ರಸ್ತ ಮಹಿಳೆಯು ಕೌಟುಂಬಿಕ ಕಾರಣಗಳಿಗಾಗಿ ಪತಿಯೊಂದಿಗೆ ಜಗಳವಾಡಿಕೊಂಡು, ಬೇಸರದಿಂದ ರಾತ್ರಿ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಒಂಟಿ ಮಹಿಳೆಯನ್ನು ಗಮನಿಸಿದ ಕಾಮುಕರು ಆಕೆಯನ್ನು ಅಡ್ಡಗಟ್ಟಿದ್ದಾರೆ. ಮಹಿಳೆಗೆ ಬಾಯಾರಿಕೆಯಾಗಿದ್ದನ್ನು ಬಂಡವಾಳ ಮಾಡಿಕೊಂಡ ಕಿರಾತಕರು, ಕುಡಿಯಲು ನೀರು ಕೊಡುವ ನೆಪದಲ್ಲಿ ಬಲವಂತವಾಗಿ ಮದ್ಯ ಕುಡಿಸಿದ್ದಾರೆ. ಮದ್ಯದ ಅಮಲಿನಲ್ಲಿ ಮಹಿಳೆ ಪ್ರಜ್ಞೆ ತಪ್ಪುತ್ತಿದ್ದಂತೆ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದಾರೆ.
ಕಾಮುಕರ ವಿಕೃತಿ ಇಷ್ಟಕ್ಕೇ ನಿಂತಿಲ್ಲ. ಅತ್ಯಾಚಾರ ಎಸಗುವ ಇಡೀ ದೃಶ್ಯವನ್ನು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಕೃತ್ಯದ ಬಳಿಕ ಮಹಿಳೆಗೆ ಪ್ರಾಣ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಲ್ಲದೆ, ಯಾವುದೇ ಭಯವಿಲ್ಲದೆ ಆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದಾಗ ತೀವ್ರ ಆಘಾತಕ್ಕೊಳಗಾದ ಸಂತ್ರಸ್ತೆ, ಧೈರ್ಯಗೆಡದೆ ತಕ್ಷಣವೇ ಬಸವಾಪಟ್ಟಣ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ಮಹಿಳೆಯ ದೂರು ದಾಖಲಾಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಬಸವಾಪಟ್ಟಣ ಠಾಣೆಯ ಪೊಲೀಸರು ಭೇಟೆಯಾಡಿದ್ದಾರೆ. ಅತ್ಯಾಚಾರ ಎಸಗಿದವರು, ವಿಡಿಯೋ ಚಿತ್ರೀಕರಣ ಮಾಡಿದವರು ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡವರನ್ನು ಪತ್ತೆ ಹಚ್ಚಿ, ಒಟ್ಟು 10 ಮಂದಿ ಯುವಕರನ್ನು ಬಂಧಿಸಿದ್ದಾರೆ. ಸದ್ಯ ಬಂಧಿತ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.










