Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದಾವಣಗೆರೆ : ನೆಲ-ಜಲ ರಕ್ಷಣೆ, ಒತ್ತುವರಿ ತೆರವು ಹಾಗೂ ಪಹಣಿ ಇಂದೀಕರಣ ತ್ವರಿತಗೊಳಿಸಿ: ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಕಟ್ಟುನಿಟ್ಟಿನ ಸೂಚನೆ

---Advertisement---

ದಾವಣಗೆರೆ: ಜಿಲ್ಲೆಯಲ್ಲಿ ನೆಲ ಮತ್ತು ಜಲ ಸಂಪನ್ಮೂಲಗಳ ಸಂರಕ್ಷಣೆ, ಕೆರೆ ಹಾಗೂ ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಪಹಣಿ ಇಂದೀಕರಣ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಅವರು ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ನೆಲ-ಜಲ ಮತ್ತು ಮಳೆನೀರು ಕೊಯ್ಲು ಕುರಿತ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

“ನೆಲ-ಜಲ ವಿಷಯವು ಸಣ್ಣ ಮತ್ತು ಬೃಹತ್ ನೀರಾವರಿ, ಕಂದಾಯ, ಕುಡಿಯುವ ನೀರು ಸರಬರಾಜು ಹಾಗೂ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳ ಮೂಲಭೂತ ಕರ್ತವ್ಯವಾಗಿದೆ. ಸಭೆಗಳು ಕೇವಲ ಕಾಟಾಚಾರಕ್ಕೆ ಸೀಮಿತವಾಗಬಾರದು. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯಿಂದ ಕೆಲಸ ಮಾಡಬೇಕು. ವಿಳಂಬ ಧೋರಣೆ ಮುಂದುವರಿದಲ್ಲಿ ಕಠಿಣ ಕ್ರಮ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.

ಹುಚ್ಚವ್ವನಹಳ್ಳಿ ಕೆರೆಯ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದ್ದರೂ ಇಂದಿನವರೆಗೂ ಪಹಣಿ ಇಂದೀಕರಣ ಆಗದಿರುವ ಬಗ್ಗೆ ಹಾಗೂ ಸ್ಥಳ ಪರಿಶೀಲನೆ ನಡೆಸಿ ಆದೇಶಿಸಿ ತಿಂಗಳು ಕಳೆದರೂ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕರ್ತವ್ಯ ಲೋಪ ಎಸಗಿರುವ ರೆವಿನ್ಯೂ ಇನ್ಸ್‌ಪೆಕ್ಟರ್ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಮತ್ತು ಸಂಬಂಧಪಟ್ಟ ತಹಶೀಲ್ದಾರ್‌ಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲು ಆದೇಶಿಸಿದರು.

‘ನಲ್ಲುಕುದುರೆ’ ಕೆರೆ ಒತ್ತುವರಿ ತೆರವು ಮತ್ತು ಇಂದೀಕರಣ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸೂಚಿಸಲಾಯಿತು. ಸೂಳೆಕೆರೆ ವ್ಯಾಪ್ತಿಯಲ್ಲಿನ ಒತ್ತುವರಿ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಮಗ್ರ ವರದಿ ರವಾನಿಸಲು ನಿರ್ದೇಶಿಸಲಾಯಿತು.

ಕೆರೆ ಮತ್ತು ಜಲಮೂಲಗಳ ಒತ್ತುವರಿ ತೆರವುಗೊಳಿಸದಿದ್ದರೆ ಲೋಕಾಯುಕ್ತ ಸಂಸ್ಥೆ ಹಾಗೂ ನ್ಯಾಯಾಲಯಗಳು ‘ಸುಮೊಟೊ’ ಕೇಸ್ ದಾಖಲಿಸುವ ಸಾಧ್ಯತೆ ಇರುತ್ತದೆ. ಅಧಿಕಾರಿಗಳು ವರ್ಗಾವಣೆಯಾಗಿ ಬೇರೆಡೆಗೆ ಹೋದರೂ, ಹಳೆಯ ವಿಫಲತೆಗಳಿಗೆ ಉತ್ತರ ನೀಡಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಭದ್ರಾ ಮತ್ತು ತುಂಗಾ ನಾಲೆಯ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ತಕ್ಷಣವೇ ಇಂದೀಕರಣ ಮಾಡಬೇಕು. ದಾವಣಗೆರೆ ನಗರದಲ್ಲಿ ಕೆನಾಲ್ ರಸ್ತೆಗಳನ್ನು ಖಾಸಗಿ ಲೇಔಟ್‌ಗಳಿಗೆ ರಸ್ತೆಗಳನ್ನಾಗಿ ತೋರಿಸಿ ದುರುಪಯೋಗಪಡಿಸಿಕೊಳ್ಳುತ್ತಿರುವುದಕ್ಕೆ ತಕ್ಷಣ ತಡೆ ನೀಡಲು ನಗರಾಭಿವೃದ್ಧಿ ಪ್ರಾಧಿಕಾರ (ದೂಡಾ) ಮತ್ತು ಮಹಾನಗರ ಪಾಲಿಕೆಗೆ ಸೂಚಿಸಿದರು.

ಆಶ್ರಯ ಯೋಜನೆಯಡಿ ಜಾಗ ಹಂಚಿಕೆಯಾಗಿ ಕಂದಾಯ ಗ್ರಾಮ/ಆಶ್ರಯ ಕಾಯ್ದಿರಿಸಲಾದ ಸ್ಥಳಗಳ ತೆರವು ವಿಚಾರದಲ್ಲಿ, ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಲು ತಿಳಿಸಿದರು.

ಕಳೆದ ತಿಂಗಳು 6.9 ಮೀಟರ್‌ನಷ್ಟಿದ್ದ ಅಂತರ್ಜಲ ಮಟ್ಟವು ಪ್ರಸ್ತುತ 7.1 ಮೀಟರ್‌ಗೆ ಕುಸಿದಿರುವುದು ಅಪಾಯಕಾರಿ ಮುನ್ಸೂಚನೆಯಾಗಿದೆ. ರೈತರು ತಮ್ಮ ಹೊಲಗಳಲ್ಲಿ ಬದುಗಳನ್ನು ನಿರ್ಮಿಸಿ ಮಳೆ ನೀರು ಕೊಯ್ಲು ಹಾಗೂ ನೀರು ಮರುಪೂರಣ (ರಿಚಾರ್ಜ್) ಕ್ರಮಗಳನ್ನು ಕೈಗೊಳ್ಳಬೇಕು.ಸರ್ಕಾರಿ ಕಚೇರಿಗಳು, ವಸತಿಗೃಹಗಳು, ಪೊಲೀಸ್ ಠಾಣೆಗಳು, ನೂತನ ವಸತಿ ಶಾಲೆಗಳು ಹಾಗೂ ಉದ್ಯಾನವನಗಳಲ್ಲಿ ಇಂಗುಗುಂಡಿ ನಿರ್ಮಿಸಿ ನೀರು ಶೇಖರಣೆ ಮಾಡುವುದು ಕಡ್ಡಾಯ. ಹೊಸ ಕಟ್ಟಡಗಳಿಗೆ ಅಂತಿಮ ‘ಒಸಿ’ ನೀಡುವ ಮುನ್ನ ಮಳೆನೀರು ಕೊಯ್ಲು ಅಳವಡಿಕೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು ಎಂದರು

40 ರಿಂದ 50 ಮನೆಗಳ ಮಳೆನೀರು ಕೊಯ್ಲು ಘಟಕಗಳನ್ನು ಜಿಯೋ ಟ್ಯಾಗಿಂಗ್ ಮಾಡಿ ‘ಜಲಶಕ್ತಿ ಅಭಿಯಾನ’ ವೆಬ್ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಯಿತು. ಕೆರೆಗಳ ಸುತ್ತಮುತ್ತ ಹಾಗೂ ಅಂತರ್ಜಲ ವಲಯಗಳಲ್ಲಿ ಅನುಮತಿ ಇಲ್ಲದೆ ಬೋರ್‌ವೆಲ್ ಕೊರೆಯುವುದು ಮತ್ತು ಕೆರೆ ಅಚ್ಚುಕಟ್ಟು ಪ್ರದೇಶ ಬಳಿ ಅಕ್ರಮವಾಗಿ ನೀರು ಎತ್ತುವುದನ್ನು ತಡೆಯಲು ಕ್ರಮ ಕೈಗೊಳ್ಳಲು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಲೇಔಟ್‌ಗಳಲ್ಲಿ ಗಿಡಗಳನ್ನು ಸೈಟಿನ ಮೂಲೆಗಳಲ್ಲಿ ನೆಡಲು ಹಾಗೂ ಕಾಂಕ್ರೀಟ್/ಟಾರ್ ರಸ್ತೆ ಕಟಿಂಗ್ ತಪ್ಪಿಸಲು ಪ್ರತಿ 200 ಮೀಟರ್‌ಗೆ 3 ಇಂಚಿನ ‘HDPE’ ಪೈಪ್‌ಗಳನ್ನು ಅಡ್ಡಲಾಗಿ ಹಾಕಿ ಎಂಡ್‌ಕ್ಯಾಪ್ ಅಳವಡಿಸಲು ಲೇಔಟ್ ಡೆವಲಪರ್‌ಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದರು

Join WhatsApp

Join Now

Join Telegram

Join Now