ಮೈಸೂರು; ಇಂದು ಮತ್ತು ನಾಳೆ ಡಾಲಿ ಧನಂಜಯ್ ಮದುವೆ ನಡೆಯಲಿದೆ. ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆದಿವೆ. ನಿನ್ನೆಯೆಲ್ಲಾ ಅರಿಶಿನ ಶಾಸ್ತ್ರದಲ್ಲಿ ಮಿಂದೆದ್ದು, ಇಂದು ಬಳೆ ಶಾಸ್ತ್ರ, ವಧು – ವರರ ಶಾಸ್ತ್ರಗಳು ನೆರವೇರಲಿವೆ. ಈಗಾಗಲೇ ಬರತಹತ್ ವೇದಿಕೆಯೂ ತಯಾರಾಗಿದೆ. ಡಾಲಿ ಮದುವೆ ಮೈಸೂರಿನ ವಸ್ತು ಪ್ರದರ್ಶನಾಲಯದ ಆವರಣದಲ್ಲಿ ನಡೆಯುತ್ತಿದೆ.

ನಾಳೆ ಮುಹೂರ್ತ ನೆರವೇರಲಿದ್ದು, ಇಂದು ಸಂಜೆ ಆರತಕ್ಷತೆ ನಡೆಯಲಿದೆ. ಈ ಆರತಕ್ಷತೆಯಲ್ಲಿ ಚಿತ್ರರಂಗದ ಗಣ್ಯರು, ರಾಜಕೀಯದ ಗಣ್ಯರು ಮತ್ತು ಅಭಿಮಾನಿಗಳನ್ನು ಡಾಲಿ ಆಹ್ವಾನ ಮಾಡಿದ್ದು, ಇಂದಿನ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಲಿದ್ದಾರೆ. ಇಂದು ಮದುವೆಯ ಸಂಭ್ರಮ ರಂಗೇರಲಿದೆ.

ಇನ್ನು ಮಗ – ಸೊಸೆ ಬಗ್ಗೆ ಡಾಲಿ ಧನಂಜಯ್ ತಂದೆ ಸ್ವಾಮಿ ಅವರು ಮಾತನಾಡಿದ್ದು, ಮದುವೆಯ ಮೊದಲ ದಿನದ ಶಾಸ್ತ್ರ ಇಂದು ನಡೆಯುತ್ತಿದೆ. ಮೊದಲು ಗಂಗೆ ಪೂಜೆ, ಕಳಸ ಸ್ಥಾಪನೆ, ವಾಗ್ದಾನ ಶಾಸ್ತ್ರ ಎಂದು ನಾವೂ ತಾಂಬೂಲ ಬದಲಾಯಿಸಿಕೊಳ್ಳುತ್ತೇವೆ. ಬಳೆ ಶಾಸ್ತ್ರ, ವಧು ವರರ ಶಾಸ್ತ್ರ ಈ ಎಲ್ಲವೂ ಮುಗಿದ ಮೇಲೆ ಸಂಜೆ ರಿಸೆಪ್ಶನ್ ನಡೆಯಲಿದೆ. ನಾಳೆ ಮದುವೆ ನಡೆಯಲಿದೆ. ಧನಂಜಯನನ್ನ ಡಾಕ್ಟರ್ ಮಾಡಿಸಬೇಕು ಎಂದುಕೊಂಡಿದ್ದೆವು. ಎಷ್ಟೇ ಖರ್ಚಾದರೂ ಪರವಾಗಿಲ್ಲ ಡಾಕ್ಟರ್ ಆಗು ಎಂದೆವು. ಆದರೆ ಅವ್ನು ಇಂಜಿನಿಯರಿಂಗ್ ಕಲಿತ. ಆಮೇಲೆ ಸಿನಿಮಾ ಮಾಡ್ತೀನಿ ಅಂತ ಹೋದ. ಆದರೆ ಡಾಕ್ಟರ್ ಅನ್ನೇ ನಮ್ಮ ಸೊಸೆಯಾಗಿ ತರ್ತಾ ಇರೋದು ನಮಗೆ ತುಂಬಾ ಖುಷಿ ಇದೆ. ಈ ಊರಿನ ಶಾಲೆ ಜೀರ್ಣೋದ್ಧಾರ, ಅರಳಿ ಕಟ್ಟೆ ಅಭಿವೃದ್ಧಿಯನ್ನು ಮಾಡಿಸಿದ್ದಾನೆ. ಹೀಗೆ ನಮ್ಮ ಮಗ ನಮ್ಮೆಲ್ಲಾ ಆಸೆಯನ್ನು ಈಡೇರಿಸಿದ್ದಾನೆ ಎಂದಿದ್ದಾರೆ.

