Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕದಲ್ಲಿ ದೇಶದ ಮೊಟ್ಟಮೊದಲ ಹಾಗೂ ಅತಿದೊಡ್ಡ ‘ಎಐ ವಿಶ್ವವಿದ್ಯಾಲಯ’ ಮತ್ತು ‘ಎಐ ಇನ್ನೋವೇಶನ್ ಹಬ್’ ಸ್ಥಾಪನೆ : ಸಿಎಂ ಡಿ.ಕೆ ಶಿವಕುಮಾರ್

---Advertisement---

ಬೆಂಗಳೂರು.ಜುಲೈ.14: ಜಾಗತಿಕ ಮಟ್ಟದ 5 ಅತ್ಯುತ್ತಮ ಎಐ ನಗರಗಳಲ್ಲಿ ಒಂದಾಗಿರುವ ಬೆಂಗಳೂರನ್ನು ಕೇವಲ ನೆನ್ನೆಯ ಸಾಧನೆಗಳಿಗೆ ಸೀಮಿತಗೊಳಿಸದೆ, ಇಡೀ ಭಾರತದ ಅಧಿಕೃತ ‘ಎಐ ರಾಜಧಾನಿ’ಯನ್ನಾಗಿ ರೂಪಿಸಲು ಸರ್ಕಾರ ಸ್ಪಷ್ಟ ದಿಕ್ಸೂಚಿಯೊಂದಿಗೆ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಪ್ರಕಟಿಸಿದ್ದಾರೆ.

ಬಿ.ಐ.ಇ.ಸಿ (BIEC) ಯಲ್ಲಿ ನಡೆದ “Google I/O Connect India – 2026” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಒಟ್ಟು ಯೂನಿಕಾರ್ನ್ ನವೋದ್ಯಮಗಳಲ್ಲಿ ಶೇ. 40 ರಷ್ಟನ್ನು ಹೊಂದಿರುವ ನಮ್ಮ ಹೆಮ್ಮೆಯ ಬೆಂಗಳೂರು ಇಂದು ಜಾಗತಿಕ ತಂತ್ರಜ್ಞಾನದ ಶಕ್ತಿಯಾಗಿದೆ ಎಂದು ಹೆಮ್ಮೆಯಿಂದ ನುಡಿದರು.

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಕೇಂದ್ರವಾಗಿಸುವ ಮಹತ್ವಾಕಾಂಕ್ಷಿ ಗುರಿಯನ್ನು ಸಾಕಾರಗೊಳಿಸಲು ದೇಶದ ಮೊಟ್ಟಮೊದಲ ಹಾಗೂ ಅತಿದೊಡ್ಡ ‘ಎಐ ವಿಶ್ವವಿದ್ಯಾಲಯ’ ಮತ್ತು ‘ಎಐ ಇನ್ನೋವೇಶನ್ ಹಬ್’ ಸ್ಥಾಪನೆಗೆ ಚಾಲನೆ ನೀಡಲಾಗುತ್ತಿದೆ. ಇದರೊಂದಿಗೆ ಶಾಲಾ ಹಂತದಿಂದಲೇ ಎಐ ಕಲಿಕೆಯನ್ನು ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಎಐ ಆರ್ಥಿಕತೆಗೆ ಅಗತ್ಯವಿರುವ ಬಲಿಷ್ಠ ಮೂಲಸೌಕರ್ಯಕ್ಕಾಗಿ ಕರಾವಳಿ ಜಿಲ್ಲೆ ಹಾಗೂ ಬೆಂಗಳೂರು ಸಮೀಪ ‘ಮುಂದಿನ ಪೀಳಿಗೆಯ ಗ್ರೀನ್ ಡೇಟಾ ಸೆಂಟರ್ಗಳನ್ನು’ ಸ್ಥಾಪಿಸಲಾಗುತ್ತಿದೆ ಎಂದು ಸಿಎಂ ಮಾಹಿತಿ ನೀಡಿದರು.

ತಂತ್ರಜ್ಞಾನದ ಬೆಳವಣಿಗೆಯು ಕೇವಲ ಬೆಂಗಳೂರಿಗೆ ಸೀಮಿತವಾಗಬಾರದು ಎಂಬ ದೃಷ್ಟಿಯಿಂದ ‘ಬಿಯಾಂಡ್ ಬೆಂಗಳೂರು’ ಯೋಜನೆಯಡಿ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ನಗರಗಳಲ್ಲಿ ಜಾಗತಿಕ ತಂತ್ರಜ್ಞಾನ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ರಾಜ್ಯದ ಮೂಲೆ ಮೂಲೆಗಳಲ್ಲಿರುವ ಪ್ರತಿಭೆಗಳಿಗೂ ಸಮಾನ ಜಾಗತಿಕ ಅವಕಾಶಗಳು ದೊರೆಯಲಿವೆ ಎಂದು ಅವರು ತಿಳಿಸಿದರು.

ಮಾನವೀಯತೆಯನ್ನು ಬದಲಿಸುವುದಲ್ಲ, ಬದಲಿಗೆ ಮಾನವನ ಸಾಮರ್ಥ್ಯವನ್ನು ಬಲಪಡಿಸುವುದೇ ತಂತ್ರಜ್ಞಾನದ ಮುಖ್ಯ ಉದ್ದೇಶ” ಎಂಬ ತತ್ವದಲ್ಲಿ ಸರ್ಕಾರ ನಂಬಿಕೆ ಇಟ್ಟಿದೆ. ನಮ್ಮ ರೈತರಿಗೆ ಕನ್ನಡದಲ್ಲೇ ಆಡಿಯೋ ರೂಪದಲ್ಲಿ ಕೃಷಿ ಸಲಹೆ ನೀಡುವುದು, ಗ್ರಾಮೀಣ ಆರೋಗ್ಯ ಕೇಂದ್ರಗಳಿಗೆ ತಂತ್ರಜ್ಞಾನದ ನೆರವು ಹಾಗೂ ಶಿಕ್ಷಣದ ಸುಧಾರಣೆಗೆ ಎಐ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ನವೋದ್ಯಮಿಗಳ ಆವಿಷ್ಕಾರಗಳನ್ನು ಪ್ರೋತ್ಸಾಹಿಸಲು ಸರ್ಕಾರವೇ ಮೊದಲ ಗ್ರಾಹಕನಾಗಲು ಸಿದ್ಧವಿರುವ ‘ಗವರ್ನಮೆಂಟ್-ಫಸ್ಟ್’ ನೀತಿಯನ್ನು ಅಳವಡಿಸಿಕೊಂಡಿದ್ದು, ಕರ್ನಾಟಕವು ತಂತ್ರಜ್ಞಾನದಲ್ಲಿ ಅತ್ಯಂತ ಪ್ರಬಲ ರಾಜ್ಯವಾಗಿ ಮುನ್ನಡೆಯಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

Join WhatsApp

Join Now

Join Telegram

Join Now