ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ದೇಶದಾದ್ಯಂತ ಸಾಹಸ ಪ್ರದರ್ಶನಗಳ ಮೂಲಕ ಗಮನ ಸೆಳೆದಿರುವ ಚಿತ್ರದುರ್ಗದ ‘ಸ್ಪೈಡರ್ ಮ್ಯಾನ್, ಮಂಕಿ ಮ್ಯಾನ್’ ಖ್ಯಾತಿಯ ಜ್ಯೋತಿರಾಜ್ ಅವರ ಮದುವೆಗೆ ದಿನಾಂಕ ನಿಗದಿಯಾಗಿದೆ. ಜ್ಯೋತಿರಾಜ್ ಅವರು ನಿವೇದಿತಾ ಎಂಬುವರೊಂದಿಗೆ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಎತ್ತರದ ಕೋಟೆ, ಕಟ್ಟಡಗಳನ್ನು ಏರುವ ಸಾಹಸ ಸೇರಿದಂತೆ ಹಲವು ಅಪಾಯಕಾರಿ ಸಾಹಸ ಪ್ರದರ್ಶನಗಳ ಮೂಲಕ ಜ್ಯೋತಿರಾಜ್ ಜನಪ್ರಿಯರಾಗಿದ್ದಾರೆ. ತಮ್ಮ ವಿಶಿಷ್ಟ ಸಾಹಸಗಳಿಂದಲೇ ‘ಸ್ಪೈಡರ್ಮ್ಯಾನ್’ ಎಂದೇ ಗುರುತಿಸಿಕೊಂಡಿರುವ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ.
ಜ್ಯೋತಿರಾಜ್ ಅವರ ವಿವಾಹ ಕಾರ್ಯಕ್ರಮವು ಆಗಸ್ಟ್ 22 ಮತ್ತು 23ರಂದು ನಡೆಯಲಿದೆ ಎಂದು ತಿಳಿದುಬಂದಿದೆ. ಮದುವೆ ಹಿನ್ನೆಲೆಯಲ್ಲಿ ಈಗಾಗಲೇ ಸಿದ್ಧತೆಗಳು ಆರಂಭವಾಗಿದ್ದು, ಆಪ್ತರು, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ಆಹ್ವಾನ ನೀಡಲಾಗಿದೆ.
ಸಾಹಸ ಪ್ರದರ್ಶನಗಳಿಂದ ಸದಾ ಸುದ್ದಿಯಲ್ಲಿರುವ ಜ್ಯೋತಿರಾಜ್ ಇದೀಗ ತಮ್ಮ ವೈಯಕ್ತಿಕ ಜೀವನದ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ. ಇದೀಗ ಅವರಿಗೆ ಮಾಡನಾಯಕನಹಳ್ಳಿ ಮೂಲದ ದೊಡ್ಡ ಉಳ್ಳಾರ್ತಿ ನಿವಾಸಿ ನಿವೇದಿತಾ ಜತೆಯಾಗಿದ್ದಾಳೆ. ಆಗಷ್ಟ್ 22-23ಕ್ಕೆ ಚಿತ್ರದುರ್ಗದಲ್ಲಿ ನಿವೇದಿತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.










