ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಪ್ರಮುಖ ಖಾದ್ಯ ತೈಲಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕ (BCD) ಕಡಿತಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಏರಿಕೆಯಿಂದ ಉಂಟಾಗಿರುವ ಒತ್ತಡ ಕಡಿಮೆ ಮಾಡಿ ಗ್ರಾಹಕರಿಗೆ ಪರಿಹಾರ ಒದಗಿಸುವುದು ಈ ಕ್ರಮದ ಉದ್ದೇಶವಾಗಿದೆ.
ಕೇಂದ್ರ ಸರ್ಕಾರದ ಸೆ.24ರ ಪ್ರಕಟಣೆ ಪ್ರಕಾರ, ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ BCD ಅನ್ನು ಶೇ.10ರಿಂದ ಶೂನ್ಯಕ್ಕೆ ಇಳಿಸಲಾಗಿದೆ. ಕಚ್ಚಾ ಸೋಯಾಬೀನ್ ಮತ್ತು ಪಾಮ್ ಎಣ್ಣೆಯ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇ.10ರಿಂದ ಶೇ.5ಕ್ಕೆ ಕಡಿತ ಮಾಡಲಾಗಿದೆ.ಅದೇ ರೀತಿ ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಸುಂಕವನ್ನೂ ಪರಿಷ್ಕರಿಸಲಾಗಿದೆ. ಸಂಸ್ಕರಿಸಿದ ಸೂರ್ಯಕಾಂತಿ, ಸೋಯಾಬೀನ್ ಮತ್ತು ಪಾಮ್ ಎಣ್ಣೆಗಳ ಮೇಲಿನ ಮೂಲ ಸುಂಕವನ್ನು ಕಡಿಮೆ ಮಾಡಲಾಗಿದ್ದು, ಕಚ್ಚಾ ಮತ್ತು ಸಂಸ್ಕರಿಸಿದ ಎಣ್ಣೆಗಳ ನಡುವಿನ 19.25 ಶೇಕಡಾ ಆಮದು ಸುಂಕದ ಅಂತರವನ್ನು ಮುಂದುವರಿಸಲಾಗಿದೆ.
ಸುಂಕ ಕಡಿತದ ಪ್ರಮುಖ ವಿವರ
ಕಚ್ಚಾ ಸೂರ್ಯಕಾಂತಿ ಎಣ್ಣೆ: BCD ಶೇ.10ರಿಂದ ಶೂನ್ಯ
ಕಚ್ಚಾ ಪಾಮ್ ಎಣ್ಣೆ: ಶೇ.10ರಿಂದ ಶೇ.5
ಕಚ್ಚಾ ಸೋಯಾಬೀನ್ ಎಣ್ಣೆ: ಶೇ.10ರಿಂದ ಶೇ.5
ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ: ಶೇ.32.5ರಿಂದ ಶೇ.22.5
ಸಂಸ್ಕರಿಸಿದ ಪಾಮ್ ಮತ್ತು ಸೋಯಾಬೀನ್ ಎಣ್ಣೆ: ಶೇ.32.5ರಿಂದ ಶೇ.27.5
ಈ ಬದಲಾವಣೆಯಿಂದ ಆಮದು ಮಾಡಿಕೊಳ್ಳುವ ಖಾದ್ಯ ತೈಲಗಳ ಲ್ಯಾಂಡಿಂಗ್ ವೆಚ್ಚ ಕಡಿಮೆಯಾಗುವ ಸಾಧ್ಯತೆ ಇದೆ. ಅಂತರರಾಷ್ಟ್ರೀಯ ಬೆಲೆ ಮತ್ತು ಸಾಗಣೆ ವೆಚ್ಚಗಳು ಸ್ಥಿರವಾಗಿದ್ದರೆ, ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಆದರೆ ಸುಂಕ ಕಡಿತದ ಸಂಪೂರ್ಣ ಲಾಭ ಚಿಲ್ಲರೆ ಗ್ರಾಹಕರಿಗೆ ಎಷ್ಟರ ಮಟ್ಟಿಗೆ ತಲುಪಲಿದೆ ಎಂಬುದು ಮಾರುಕಟ್ಟೆ ಬೆಲೆಗಳ ಮೇಲೂ ಅವಲಂಬಿತವಾಗಿರಲಿದೆ.ಸೆಪ್ಟೆಂಬರ್ನಿಂದ ನವೆಂಬರ್ವರೆಗೆ ದೇಶದಲ್ಲಿ ಹಬ್ಬಗಳ ಸಾಲು ಇರುವುದರಿಂದ ಸಿಹಿತಿಂಡಿ, ತಿಂಡಿ-ತಿನಿಸುಗಳು ಹಾಗೂ ಕರಿದ ಆಹಾರಗಳ ಬಳಕೆ ಹೆಚ್ಚಾಗುತ್ತದೆ. ಹೀಗಾಗಿ ಅಡುಗೆ ಎಣ್ಣೆಗೆ ಬೇಡಿಕೆಯೂ ಹೆಚ್ಚಾಗುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಸರ್ಕಾರದ ಸುಂಕ ಕಡಿತದಿಂದ ಆಮದು ಪೂರೈಕೆ ಹೆಚ್ಚಳವಾಗುವ ನಿರೀಕ್ಷೆ ಇದೆ.
ಭಾರತ ತನ್ನ ಸಸ್ಯಜನ್ಯ ಎಣ್ಣೆಯ ಅಗತ್ಯದ ಸುಮಾರು ಎರಡು-ಮೂರನೇ ಭಾಗವನ್ನು ಆಮದು ಮಾಡಿಕೊಳ್ಳುತ್ತದೆ. ಪಾಮ್, ಸೋಯಾಬೀನ್ ಮತ್ತು ಸೂರ್ಯಕಾಂತಿ ಎಣ್ಣೆ ಸೇರಿದಂತೆ ಪ್ರಮುಖ ಖಾದ್ಯ ತೈಲಗಳನ್ನು ವಿವಿಧ ದೇಶಗಳಿಂದ ಭಾರತ ಆಮದು ಮಾಡಿಕೊಳ್ಳುತ್ತದೆ. ಅಡುಗೆ ಎಣ್ಣೆ ಬೆಲೆ ಏರಿಕೆಗೆ ಕಡಿವಾಣ ಹಾಕುವ ಉದ್ದೇಶದಿಂದ ಕೇಂದ್ರದ ಈ ಸುಂಕ ಕಡಿತ ನಿರ್ಧಾರ ಕೈಗೊಳ್ಳಲಾಗಿದೆ. ಆಮದು ವೆಚ್ಚ ಇಳಿಕೆಯ ಲಾಭವನ್ನು ತೈಲ ಕಂಪನಿಗಳು ಹಾಗೂ ವ್ಯಾಪಾರಿಗಳು ಗ್ರಾಹಕರಿಗೆ ವರ್ಗಾಯಿಸಿದರೆ, ಮುಂಬರುವ ದಿನಗಳಲ್ಲಿ ಚಿಲ್ಲರೆ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ.










