ಸುದ್ದಿಒನ್,ಬೆಂಗಳೂರು,ಮೇ.26: ಪತಿಯ ವೃತ್ತಿಜೀವನ ಹಾಗೂ ಸಮಾಜದಲ್ಲಿ ಆತನಿಗಿರುವ ಗೌರವಕ್ಕೆ ಕಳಂಕ ತರುವ ಉದ್ದೇಶದಿಂದ ಆತನ ಮೇಲಧಿಕಾರಿಗಳಿಗೆ ಸುಳ್ಳು ದೂರು ನೀಡುವುದು ಮತ್ತು ಇಲ್ಲಸಲ್ಲದ ಆರೋಪಗಳನ್ನು ಮಾಡುವುದು ಕೇವಲ ದಾಂಪತ್ಯದ ಜಗಳವಲ್ಲ, ಅದು ‘ಮಾನಸಿಕ ಕ್ರೌರ್ಯ’ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೈನಿಕನೊಬ್ಬನಿಗೆ ಕೌಟುಂಬಿಕ ನ್ಯಾಯಾಲಯ (ಫ್ಯಾಮಿಲಿ ಕೋರ್ಟ್) ನೀಡಿದ್ದ ವಿಚ್ಛೇದನವನ್ನು ಎತ್ತಿಹಿಡಿದಿರುವ ಹೈಕೋರ್ಟ್, ಇದನ್ನು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ. ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಹಾಗೂ ಕೆ. ರಾಜೇಶ್ ರೈ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠವು ಸುಪ್ರೀಂಕೋರ್ಟ್ನ ವಿವಿಧ ತೀರ್ಪುಗಳನ್ನು ಉಲ್ಲೇಖಿಸಿ ಈ ಆದೇಶ ಪ್ರಕಟಿಸಿದೆ.
ಪತ್ನಿಯು ಯಾವುದೇ ಬಲವಾದ ಕಾರಣವಿಲ್ಲದೆ ಪದೇಪದೇ ಗಂಡನ ಮನೆ ಬಿಟ್ಟು ಹೋಗುವುದು, ಮಹಿಳಾ ಸಾಂತ್ವನ ಕೇಂದ್ರಗಳು ಹಾಗೂ ಪತಿಯ ಮಿಲಿಟರಿ ಮೇಲಧಿಕಾರಿಗಳಿಗೆ ಸರಣಿ ಸುಳ್ಳು ದೂರುಗಳನ್ನು ನೀಡುವುದು ಮಾನಸಿಕ ಕಿರುಕುಳದ ವ್ಯಾಪ್ತಿಗೆ ಬರುತ್ತದೆ ಎಂದು ಕೋರ್ಟ್ ಹೇಳಿದೆ.
ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಪತ್ನಿಯು ತನಗೆ ಪತಿಯೊಂದಿಗೆ ಮತ್ತೆ ಬಾಳುವೆ ಮಾಡುವ ಯಾವುದೇ ಇಚ್ಛೆ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ. ಬದಲಿಗೆ, ಪತಿ ಹೊಸದಾಗಿ ಕಟ್ಟಿಸಿರುವ ಮನೆಯಲ್ಲಿ ಆಶ್ರಯ ಮತ್ತು ಮಾಸಿಕ ಜೀವನಾಂಶ ಹೆಚ್ಚಿಸಬೇಕೆಂದು ಮಾತ್ರ ಬೇಡಿಕೆ ಇಟ್ಟಿದ್ದರು. ಇದನ್ನು ಗಮನಿಸಿದ ನ್ಯಾಯಪೀಠ, ಇಬ್ಬರ ನಡುವಿನ ವೈವಾಹಿಕ ಸಂಬಂಧ ಈಗಾಗಲೇ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಅಭಿಪ್ರಾಯಪಟ್ಟಿದೆ.
ಕೊಡಗಿನಲ್ಲಿ 2008ರಲ್ಲಿ ಈ ದಂಪತಿಯ ವಿವಾಹವಾಗಿದ್ದು, ಇವರಿಗೊಬ್ಬ ಗಂಡು ಮಗನಿದ್ದಾನೆ. ಆದರೆ, 2013ರಿಂದಲೇ ಇಬ್ಬರೂ ಪರಸ್ಪರ ದೂರವಾಗಿದ್ದರು. ಪತ್ನಿಯ ನಿರಂತರ ಸುಳ್ಳು ದೂರುಗಳಿಂದಾಗಿ ತನ್ನ ಸೇನಾ ವೃತ್ತಿಜೀವನ ಮತ್ತು ಗೌರವಕ್ಕೆ ತೀವ್ರ ಧಕ್ಕೆ ಬಂದಿದೆ ಎಂದು ನೊಂದ ಪತಿ ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್ ಮೆಟ್ಟಿಲೇರಿದ್ದರು.
ಪತ್ನಿಯ ನಿರಂತರ ಸುಳ್ಳು ಆರೋಪಗಳು ಮತ್ತು ಆಕೆಯ ನಡವಳಿಕೆಯಿಂದಾಗಿ ಪತಿಯು ತೀವ್ರ ಮಾನಸಿಕ ಕಿರುಕುಳ ಅನುಭವಿಸುವಂತಾಗಿದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯ ಈ ಹಿಂದೆ ನೀಡಿದ್ದ ವಿಚ್ಛೇದನದ ತೀರ್ಪು ಸಂಪೂರ್ಣ ನ್ಯಾಯಸಮ್ಮತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

















