ಫಿಲ್ಮ್ ಚೆಂಬರ್ ಮುಂದೆ ನಿರ್ಮಾಪಕ ಎಮ್ ಎನ್ ಕುಮಾರ್ ಅವರು ಎರಡನೇ ದಿನವೂ ಧರಣಿ ಮುಂದುವರೆಸಿದ್ದಾರೆ. ಅವರ ಧರಣಿಗೆ ಚಿತ್ರರಂಗದ ಹಲವರು ಸಾಥ್ ನೀಡಿದ್ದಾರೆ. ಈ ವಿಚಾರ ದೊಡ್ಡದಾಗುತ್ತಾ ಹೋಗುತ್ತಿರುವ ಕಾರಣ ಕ್ರೇಜಿ ಸ್ಟಾರ್ ರವಿಚಂದ್ರನ್ ಮಧ್ಯಸ್ಥಿಕೆ ವಹಿಸಿದ್ದಾರೆ. ನಿರ್ಮಾಪಕರನ್ನು ಕರೆದು ಮಾತನಾಡಲು ಮುಂದಾಗಿದ್ದಾರೆ.
ಇನ್ನು ಧರಣಿಯಲ್ಲಿ ಸುದೀಪ್ ಮ್ಯಾನೇಜರ್ ಆಗಿದ್ದಂತ ಯೋಗೀಶ್ ದ್ವಾರಕೀಶ್ ಅವರು ಕೂಡ ನಡೆದಿರುವುದು ಸತ್ಯ ಎಂದೇ ಹೇಳಿದ್ದಾರೆ. ಜೊತೆಗೆ ಫಿಲ್ಮ್ ಚೆಂಬರ್ ನ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಅವರು ಕಿವಿ ಮಾತು ಹೇಳಿದ್ದಾರೆ.
ಮಾತನಾಡಿದ ಸಾರಾ ಗೋವಿಂದು, ಒಂದೂವರೆ ತಿಂಗಳಿಂದ ಎಲ್ಲಾ ವಿದ್ಯಾಮಾನಗಳನ್ನ ನೋಡ್ತಾ ಇದ್ದೀನಿ. ಆರೋಗ್ಯ ಸರಿಯಿಲ್ಲದ ಕಾರಣ ಮನೆಯಲ್ಲಿಯೇ ಇದ್ದೆ. ಆದ್ರೆ ಸಮಸ್ಯೆ ಬಗೆಹರಿಸಲೇ ಬೇಕಾಗಿದೆ ಇದು. ಸುದೀಪ್ ಬೇರೆ ಅಲ್ಲ, ನಿರ್ಮಾಪಕರು ಬೇರೆ ಅಲ್ಲ. ನನ್ನ ಕಾಲದಲ್ಲಿ ಸುಮಾರು ಸಾವಿರಾರು ಇಂತ ಸಮಸ್ಯೆ ಬಗೆಹರಿಸಿದ್ದೇವೆ.
ರನ್ನ ಚಿತ್ರ ಬಿಡುಗಡೆಯಾದಂತ ಸಂದರ್ಭದಲ್ಲಿ ನಡೆದ ಘಟನೆ ಇದು. ಕುಮಾರ್ ಅವರಿಗೆ ನಿರ್ಮಾಪಕರು ಹಣ ಕೊಡಬೇಕಾಗಿತ್ತು. ಸುದೀಪ್ ಅವರ ಬಳಿ ಕುಮಾರ್ ಕೇಳಿದ್ದರು. ಬಳಿಕ ಸುದೀಪ್ ಅವರೇ ಆ ಸಮಯದಲ್ಲಿ ವಾಣಿಜ್ಯ ಮಂಡಳಿಗೆ ಬಂದಿದ್ದರು. 2 ಕೋಟಿ 35 ಲಕ್ಷ ಹಣವನ್ನು ಕೊಟ್ಟಿದ್ದಕ್ಕೆ ಸಾಕ್ಷಿ ನಾನಿದ್ದೀನಿ. ಎಲ್ಲಾ ನಿರ್ಮಾಪಕರಿಗೂ ಇದು ಗೊತ್ತಿರುವ ವಿಚಾರ. ಇಂಥ ಸಮಸ್ಯೆಗಳು ಬಂದಾಗ ಸಂಧಾನ ಸಮಿತಿ ಅಂತ ಮಾಡ್ತೀವಿ. ಆ ಸಮಿತಿಯಲ್ಲಿ 15 ರಿಂದ 18 ಜನ ಇರ್ತಾರೆ. ಶಿವರಾಜ್ ಕುಮಾರ್, ರವಿಚಂದ್ರನ್, ಉಮೇಶ್ ಬಣಕಾರ್, ಕೆ ಮಂಜು, ನಾಗಣ್ಣ, ಗಂಗಾಧರ್ ಹೀಗೆ ಸಾಕಷ್ಟು ಜನ ಸಮಿತಿಯಲ್ಲಿದ್ದಾರೆ. ಸುದೀಪ್ ಅವರು ಬೇಕಾದಷ್ಟು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಫಿಲ್ಮ್ ಚೇಂಬರ್ ಗೆ ಅವರು ಬಂದಿದ್ದರೆ ಐದತ್ತು ನಿಮಿಷದಲ್ಲಿ ಸಮಸ್ಯೆ ಬಗೆಹರಿಯುತ್ತಿತ್ತು ಎಂದಿದ್ದಾರೆ.
ನೀವೂ ಬಂದು ಸಮಸ್ಯೆ ಬಗೆಹರಿಸಿಕೊಂಡಿದ್ದರೆ ನಮಗೂ ಸಂತೋಷ ಆಗ್ತಾ ಇತ್ತು. ಕುಮಾರ್ ಹೇಳುವುದು ಸುಳ್ಳು ಆಗಿದ್ರೆ ನೀವೂ ಅದನ್ನ ಇಲ್ಲಿ ಸಾಬೀತು ಮಾಡಿ. ಒಬ್ಬ ನಿರ್ಮಾಪಕನಿಗೆ 10 ಕೋಟಿ ಮಾನನಷ್ಟ ಮೊಕದ್ದಮೆ ಹಾಕುವುದು ಒಳ್ಳೆಯದ್ದಲ್ಲ. ಸುದೀಪ್ ಅವರು ಐದು ಕೋಟಿ ಕೊಡ್ತೀನಿ ಅಂದಿದ್ದಾರೆ. ನಿಮ್ಮ ನಿರ್ಮಾಪಕರೇ ಈ ಮಾತನ್ನು ಹೇಳಿದ್ದಾರೆ. ಐದು ಕೋಟಿ ಕಡಿಮೆ ಹಣ ಅಲ್ಲ. ಯಾರು ಸುಮ್ಮ ಸುಮ್ಮನೆ ಆ ಹಣ ನೀಡುವುದಿಲ್ಲ. ತಮಿಳುನಾಡಿನಲ್ಲಿ ನಟರಿಗೆ ರೆಡ್ ಕಾರ್ಡ್ ಕೊಟ್ಟಿದ್ದಾರೆ. ನಾವ್ಯಾರು ಆ ರೀತಿ ಮಾಡಿಲ್ಲ ಎಂದಿದ್ದಾರೆ.