ನವದೆಹಲಿ: ದೇಶದಲ್ಲಿ ಹಣದುಬ್ಬರದ ಬಿಸಿಯ ನಡುವೆಯೇ ಸಾರ್ವಜನಿಕರಿಗೆ ಮತ್ತೊಂದು ಆಘಾತ ಎದುರಾಗಿದೆ. ಗೃಹಬಳಕೆಯ ಅಡುಗೆ ಅನಿಲ (LPG) ಸಿಲಿಂಡರ್ ಬೆಲೆಯಲ್ಲಿ ಭಾರಿ ಏರಿಕೆಯಾಗಿದ್ದು, ಜೂನ್ 7 ರಿಂದಲೇ (ಇಂದಿನಿಂದ) ಹೊಸ ದರಗಳು ಜಾರಿಗೆ ಬರಲಿವೆ.ಕಳೆದ ಮೂರು ತಿಂಗಳಲ್ಲಿ ನಡೆದಿರುವ ಎರಡನೇ ಅತಿ ದೊಡ್ಡ ಬೆಲೆ ಏರಿಕೆ ಇದಾಗಿದೆ.
ದೇಶೀಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 29 ರೂಪಾಯಿ ಹೆಚ್ಚಿಸಲಾಗಿದೆ. ಈ ಪರಿಷ್ಕರಣೆಯ ನಂತರ, ದೆಹಲಿಯಲ್ಲಿ 14.2 ಕೆಜಿ ತೂಕದ ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್ ಬೆಲೆ 913 ರೂಪಾಯಿಯಿಂದ 942 ರೂಪಾಯಿಗೆ ಏರಿಕೆಯಾಗಿದೆ.ಇದಕ್ಕೂ ಮುನ್ನ ಮಾರ್ಚ್ 7 ರಂದು ಸಿಲಿಂಡರ್ ಬೆಲೆಯಲ್ಲಿ ಭಾರಿ 60 ರೂಪಾಯಿ ಹೆಚ್ಚಳ ಮಾಡಲಾಗಿತ್ತು.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಮತ್ತು ಭೌಗೋಳಿಕ ರಾಜಕೀಯ ಉದ್ವಿಗ್ನತೆಯಿಂದಾಗಿ ಜಾಗತಿಕ ಇಂಧನ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮವಾಗಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಗಗನಕ್ಕೇರಿವೆ. ಮಾರ್ಚ್‌ನಲ್ಲಿ ಮಾಡಲಾಗಿದ್ದ ಬೆಲೆ ಏರಿಕೆಯು ತೈಲ ಕಂಪನಿಗಳ ನಷ್ಟವನ್ನು ಭಾಗಶಃ ಮಾತ್ರ ಸರಿದೂಗಿಸಿತ್ತು. ಈ ಹೊಸ ಪರಿಷ್ಕರಣೆಗೆ ಮುನ್ನ, ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) ಮಾರಾಟ ಮಾಡುವ ಪ್ರತಿ ಎಲ್‌ಪಿಜಿ ಸಿಲಿಂಡರ್ ಮೇಲೆ ಸುಮಾರು 703 ರೂಪಾಯಿಗಳಷ್ಟು ನಷ್ಟ ಅನುಭವಿಸುತ್ತಿದ್ದವು ಎಂದು ಉದ್ಯಮದ ಮೂಲಗಳು ತಿಳಿಸಿವೆ.








