ಬೆಂಗಳೂರು: ಇಂದು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನಾಯಕರು ಪ್ರತಿಭಟನೆಗಿಳಿದಿದ್ದಾರೆ. ಸಿಲಿಂಡರ್ ಗೆ ನಮಸ್ಕಾರ ಮಾಡಿ, ಅದನ್ನ ತಲೆಮೇಲೆ ಹೊತ್ತು ವಿನೂತನವಾಗಿ ಪ್ರತಿಭಟಿಸುತ್ತಿದ್ದಾರೆ.
ಇದೇ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾರ್ಚ್ 31 ಆರ್ಥಿಕ ವರ್ಷ ಮುಕ್ತಾಯ. 11 ದಿನದಲ್ಲಿ 10 ಬಾರಿ ಬೆಲೆ ಏರಿಕೆ ಮಾಡಿದ್ದಾರೆ. ಇವತ್ತೆ ಯಾಕೆ ಆಯ್ಕೆ ಮಾಡಿದ್ದೀವಿ ಅಂದ್ರೆ, ಇವತ್ತಿಗೆ ಈ ವರ್ಷದ ಲೆಕ್ಕ ಬರುತ್ತೆ. ನಮಗೆ ದಿನಾ ಪುಕ್ ಪಾಕೇಟ್ ಆಗುತ್ತಾ ಇದೆ. ಪ್ರತಿಯೊಬ್ಬರ ಆದಾಯವನ್ನ ಡಬ್ಬಲ್ ಮಾಡ್ತೀವಿ ಅಂತ ಬಿಜೆಪಿ ಸರ್ಕಾರ ಹೇಳಿದ್ರು.
ಬೆಲೆ ಏರಿಕೆ ಗಗನಕ್ಕೇರಿದೆ. ಆದಾಯ ಪಾತಾಳಕ್ಕೆ ಹೋಗಿದೆ. ಎಲ್ಲರೂ ನೋವು ಅನುಭವಿಸುತ್ತಿದ್ದಾರೆ. ಈಗಾಗಲೇ ಸುಮಾರು 110 ರೂಪಾಯಿ ಮುಟ್ಟಿದೆ. ಇದನ್ನ ವಿರೋಧಿಸಿಯೆ ನಾವೂ ಪ್ರತಿಭಟಿಸುತ್ತಿದ್ದೇವೆ. ಕಾಂಗ್ರೆಸ್ ಕಚೇರಿ ಮುಂದೆ ನಾವೆಲ್ಲರೂ ಪ್ರತಿಭಟನೆ ಶುರು ಮಾಡಿದ್ದೇವೆ.
ನಮ್ಮ ಕರ್ನಾಟಕ ರಾಜ್ಯದ ಜನ ದಡ್ಡರಲ್ಲ. ಅವಕಾಶಕ್ಕಾಗಿ ಕಾಯ್ದುಕೊಂಡಿದ್ದಾರೆ. ಜನರಿಗೆ ಇರುವ ನೋವು ಮತ ಹಾಕುವಾಗ ಹೊರ ಬರುತ್ತೆ, ಬಿಜೆಪಿ ಸರ್ಕಾರವನ್ನ ಕಿತ್ತೊಗೆಯೋ ಮೂಲಕ ಹೊರ ಬರಲಿದೆ. ಕಾಂಗ್ರೆಸ್ ಪಕ್ಷ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದೆ. ಜನಕ್ಕಂತು ಪ್ರಾಣ ಹಿಂಡುತ್ತಿದ್ದಾರೆ. ನೂರು ಚಪ್ಪಲಿ ಏಟು ತಿಂದರು ದುಡ್ ಏಟನ್ನ ತಿನ್ನೋದಕ್ಕೆ ಆಗಲ್ಲ. ಜನರ ಜೀವನದ ಜೊತೆಗೆ ಆಟ ಆಡ್ತಾ ಇದ್ದಾರೆ. ಸಮಾಜವನ್ನ ಹೊಡೆಯುವ ಕೆಲಸ ಅವರದ್ದು ಆದ್ರೆ ನಮ್ಮದು ಸಮಾಜವನ್ನ ಒಟ್ಟುಗೂಡಿಸುವಂತ ಕೆಲಸವಾಗುತ್ತಿದೆ ಎಂದಿದ್ದಾರೆ.