ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ ಈ ಎಲ್ಲಾ ವಿಚಾರಗಳು ಸಾಕಷ್ಟು ಚರ್ಚಿತ ವಿಷಯಗಳಾಗಿದ್ದವು. ಇದಕ್ಕೆಲ್ಲಾ ಬಿಹಾರ ಚುನಾವಣೆ ಕಳೀಲಿ ಎಂಬ ಮಾತುಗಳು ಕೇಳಿ ಬಂದಿದ್ದವು. ಒಂದು ವೇಳೆ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲೂ ಸಾಕಷ್ಟು ಬದಲಾವಣೆಗಳು ಆಗ್ತಾ ಇತ್ತು. ಆದರೆ ಈಗ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ರಾಜ್ಯದಲ್ಲಿ ಆ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ಸಿದ್ದರಾಮಯ್ಯ ಅವರು ಬಹಳ ಅನಿವಾರ್ಯತೆ ಎಂಬುದು ಎಲ್ಲರಿಗೂ ಗೊತ್ತು. ಯಾಕಂದ್ರೆ ಸಿಎಂ ಸಿದ್ದರಾಮಯ್ಯ ಅವರು ಹಿಂದುಳಿದ ನಾಯಕ ಮಾತ್ರವಲ್ಲ ಅಲ್ಪಸಂಖ್ಯಾತ ಮತಗಳನ್ನು ಸೆಳೆಯುವಂತಹ ಪ್ರಭಾವಿ ನಾಯಕ ಕೂಡ ಆಗಿದ್ದಾರೆ. ಈಗಿನ ಪರಿಸ್ಥಿತಿಯಲ್ಲಿ ಅಷ್ಟು ರಿಸ್ಕ್ ತೆಗೆದುಕೊಳ್ಳುವುದಕ್ಕೆ ಹೈಕಮಾಂಡ್ ಕೂಡ ರೆಡಿ ಇಲ್ಲ ಅನ್ಸುತ್ತೆ.
ಕರ್ನಾಟಕ, ತೆಲಂಗಾಣ, ಹಿಮಾಚಲ ಪ್ರದೇಶದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡಿಕೊಂಡರೆ ಕರ್ನಾಟಕ ದೊಡ್ಡ ರಾಜ್ಯವಾಗಿದೆ. ಕರ್ನಾಟಕದಲ್ಲಿ 135 ಸೀಟುಗಳೊಂದಿಗೆ ಗಟ್ಟಿಯಾಗಿದೆ. ಕರ್ನಾಟಕದ ಬಹುತೇಕ ಕ್ಷೇತ್ರದಲ್ಲೂ ಪ್ರಭಾವ ಬೀರುವಂತಹ ಪ್ರಭಾವಿ ನಾಯಕ ಆಗಿದ್ದಾರೆ. ಹೀಗಾಗಿ ಈ ಪರಿಸ್ಥಿತಿಯಲ್ಲೇನಾದರೂ ಸಿದ್ದರಾಮಯ್ಯ ಅವರನ್ನು ಇಳಿಸಿದರೆ ಸರ್ಕಾರಕ್ಕೆ ಅಂದ್ರೆ ಕಾಂಗ್ರೆಸ್ ಪಕ್ಷಕ್ಕೆ ತೊಂದರೆಯಾಗುವ ಸಾಧ್ಯತೆ ಇದೆ. ಬಿಹಾರ ಸೋಲಿನ ಬೇಸರದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದ ಅಧಿಕಾರಕ್ಕೆ ಕೈ ಹಾಕುವುದು ಅನುಮಾನ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರ ಖುರ್ಚಿ ಸದ್ಯಕ್ಕೆ ಭದ್ರವಾಗಿದೆ ಎನ್ನಲಾಗಿದೆ. ಉಳಿದಂತೆ ಸಚಿವ ಸಂಪುಟ ಪುನರ್ ರಚನೆಯ ಬಗ್ಗೆ ಇನ್ನಷ್ಟೇ ನಿರ್ಧಾರವಾಗಬೇಕಿದೆ.
















