ಸುದ್ದಿಒನ್,ಬೆಂಗಳೂರು,ಮೇ.15: ರಾಜ್ಯದ ಜನತೆಗೆ ಇಂಧನ ಬೆಲೆ ಏರಿಕೆಯ ಬಿಸಿ ಜೋರಾಗಿ ತಟ್ಟುತ್ತಿದೆ. ಇಂದಿನಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಭಾರಿ ಏರಿಕೆಯಾದ ಬೆನ್ನಲ್ಲೇ, ಪರಿಸರ ಸ್ನೇಹಿ ಇಂಧನವೆಂದೇ ನಂಬಲಾಗಿದ್ದ ಸಿಎನ್ಜಿ (CNG) ಬೆಲೆಯೂ ಗಗನಕ್ಕೇರಿದೆ. ಈ ದಿಢೀರ್ ದರ ಪರಿಷ್ಕರಣೆಯು ಆಟೋ ಚಾಲಕರು ಹಾಗೂ ಕ್ಯಾಬ್ ಮಾಲೀಕರನ್ನು ಸಂಕಷ್ಟಕ್ಕೆ ದೂಡಿದೆ.
ಪ್ರತಿ ಕೆಜಿ ಸಿಎನ್ಜಿ ದರದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರಗಳು ಇಂದು ಮುಂಜಾನೆಯಿಂದಲೇ ಜಾರಿಗೆ ಬಂದಿವೆ. ಈ ಮೂಲಕ ಸಿಟಿಲಿ ಪ್ರತಿ ಕೆಜಿ ಸಿಎನ್ಜಿ ಬೆಲೆ 93 ರೂಪಾಯಿಗೆ ತಲುಪಿದೆ. ವಿತರಕರು ಮತ್ತು ನಗರಗಳ ಆಧಾರದ ಮೇಲೆ ದರದಲ್ಲಿ 30 ಪೈಸೆಯಿಂದ 1 ರೂಪಾಯಿವರೆಗೆ ವ್ಯತ್ಯಾಸವಿರಬಹುದು ಎಂದು ತಿಳಿದುಬಂದಿದೆ.
ನಗರದ ಸಾರಿಗೆ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಟೋರಿಕ್ಷಾ, ಕ್ಯಾಬ್ಗಳು ಮತ್ತು ಸರಕು ಸಾಗಣೆ ವಾಹನಗಳು (ಟೆಂಪೋ, ಡೆಲಿವರಿ ವ್ಯಾನ್) ಪ್ರಮುಖವಾಗಿ ಸಿಎನ್ಜಿ ಇಂಧನವನ್ನೇ ಅವಲಂಬಿಸಿವೆ. ಪೆಟ್ರೋಲ್ ಬೆಲೆ ಏರಿಕೆಯಿಂದ ಬಚಾವಾಗಲು ಸಿಎನ್ಜಿಗೆ ಮೊರೆ ಹೋಗಿದ್ದ ಚಾಲಕರಿಗೆ ಈಗ ಈ ಏರಿಕೆಯು ನುಂಗಲಾರದ ತುತ್ತಾಗಿ ಪರಿಣಮಿಸಿದೆ.ಇಂಧನ ದರ ಏರಿಕೆಯಿಂದಾಗಿ ಆಟೋ ಮತ್ತು ಕ್ಯಾಬ್ ಬಾಡಿಗೆ ದರಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಇದು ಸಾಮಾನ್ಯ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಲಿದೆ.
ಪೆಟ್ರೋಲ್, ಡೀಸೆಲ್ ದರದಲ್ಲಿ 3 ರೂ. ಏರಿಕೆ
ಸಿಎನ್ಜಿ ಮಾತ್ರವಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲೂ ಇಂದು ಭಾರಿ ಏರಿಕೆ ಕಂಡುಬಂದಿದೆ. ದೇಶಾದ್ಯಂತ ಪ್ರತಿ ಲೀಟರ್ಗೆ ಅಂದಾಜು 3 ರೂಪಾಯಿ ಹೆಚ್ಚಳವಾಗಿದ್ದು, ವಾಹನ ಸವಾರರು ಕಂಗಾಲಾಗಿದ್ದಾರೆ. ಅಂತರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ಪರಿಣಾಮವಾಗಿ ಈ ದರ ಹೆಚ್ಚಳವಾಗಿದ್ದು, ಸಾರಿಗೆ ವೆಚ್ಚ ಹೆಚ್ಚಾಗುವುದರಿಂದ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗುವ ಆತಂಕ ಎದುರಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








