ಬೆಂಗಳೂರು: ಈ ಅವಧಿ ಕೊನೆ. ಸಿಎಂ ಸಿದ್ದರಾಮಯ್ಯ ಅವರು ಚುನಾವಣೆಗೆ ನಿಲ್ಲಲ್ಲ. ಆದರೆ ಅವರದ್ದೇ ತತ್ವಗಳನ್ನು ರೂಢಿಸಿಕೊಂಡು ಬರುತ್ತಿರುವ ಸತೀಶ್ ಜಾರಕಿಹೊಳಿ ಅವರು ಉತ್ತರಾಧಿಕಾರಿಯಾಗಬಹುದು ಎಂದು ಡಾ.ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿದ್ದರು. ಸದ್ಯ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉತ್ತರಾಧಿಕಾರಿ ವಿಚಾರ ಚರ್ಚೆಯಾಗುತ್ತಿದೆ.
ಈ ಹೇಳಿಕೆಗೆ ಸಂಬಂಧಿಸಿದಂತೆ ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ನಾಯಕತ್ವದ ಲೆಕ್ಕದಲ್ಲಿ ಯತೀಂದ್ರ ಮಾತನಾಡಿಲ್ಲ ಅಂತ ನನಗೆ ಅನ್ನಿಸುತ್ತೆ. ಸಮಾಜದ ಬದ್ಧತೆ, ಪಕ್ಷದ ಬದ್ಧತರ ಹಿನ್ನೆಲೆಯಲ್ಲಿ ಮಾತನಾಡಿದ್ದಾರೆ. ಹಿಂದೆ ಅವರು ಅಹಿಂದ ಸಂಘಟನೆಯಲ್ಲಿದ್ದರು, ಅವರಿಗೆ ಆ ಬದ್ಧತೆ ಇದೆ ಅಂತ ಹೇಳಿರಬಹುದು. ಅದರಲ್ಲಿ ತಪ್ಪೇನಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ಮಾತನಾಡಿದ್ದಾರೆ.

ಇದೇ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಸೈದ್ಧಾಂತಿಕವಾಗಿ ಕೆಲವರು ನಮ್ಮ ಪಕ್ಷದಲ್ಲಿದ್ದಾರೆ. ಸತೀಶ್ ಜಾರಕಿಹೊಳಿ ಸೈದ್ಧಾಂತಿಕವಾಗಿದ್ದಾರೆ. ಮೂಢನಂಬಿಕೆ ನಿವಾರಿಸಲು ಸಂಘಟನೆ ಮಾಡಿಕೊಂಡು ಕೆಲಸ ಮಾಡಿದ್ದಾರೆ. ಯತೀಂದ್ರ ಅವರು ಹೇಳಿರುವುದರಲ್ಲಿ ತಪ್ಪೇನಿದೆ..? ಸಂವಿಧಾನ ಪರವಾಗಿ ಮೂಢನಂಬಿಕೆ ವಿರುದ್ಧ ಅವರು ಹೋರಾಟ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಪರ ಇದ್ದಾರೆ ಎಂದರೆ ತಪ್ಪೇನಿದೆ..? ಐಡಿಯಾಲಜಿ ಪ್ರಕಾರ ಯಾರಾದರೂ ವಾರಸುದಾರರು ಇರಬೇಕಲ್ಲವಾ. ಐಡಿಯಾಲಜಿಯನ್ನು ಅಧಿಕಾರ ಅನುಭವಿಸಿರೋರೆ ಮುಂದುವರೆಸಬೇಕು. ಸೈದ್ದಾಂತಿಕವಾಗಿ ಇವರು ಬದ್ಧರಿದ್ದಾರೆ ಎಂದರೆ ತಪ್ಪೇನಿದೆ. ಯಾರಾದರೂ ಒಬ್ಬರು ಮುಂದುವರೆಸಲೇ ಬೇಕು ಅಲ್ಲವೇ..? ತತ್ವ ಸಿದ್ಧಾಂತವನ್ನ ಅವರಾಗಲಿ ನಾವಾಗಲಿ ಬೆಳೆಸಬೇಕು. ಸ್ವಾಭಿಮಾನದ ಬದುಕನ್ನ ಎಲ್ಲರಿಗೂ ಕೊಡಬೇಕು. ಅದರ ಬದ್ಧತೆ ನಮ್ಮ ಮೇಲಿದೆ. ಮೊದಲಿನಿಂದಲೂ ಡಿಕೆಶಿ ಸಾಹೇಬ್ರು ಭಕ್ತರಿದ್ದಾರೆ. ಈಗ ನೀವೂ ಫೋಕಸ್ ಮಾಡಿದ್ದೀರಿ ಅಷ್ಟೇ ಎಂದಿದ್ದಾರೆ.















