ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಮತ್ತು ಹಲವು ಸಂಘಟನೆಗಳ ಒಕ್ಕೂಟ ನಡೆಸುತ್ತಿರುವ ಪ್ರತಿಭಟನೆ 56ನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ್ದು, ರೈತರಿಗೆ ಭರವಸೆ ನೀಡಿದ್ದಾರೆ. ನಾವೂ ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ. ಅಧಿಕಾರಕ್ಕಿಂತ ನಮಗೆ ರೈತರ ಹಿತಾಸಕ್ತಿ ಮುಖ್ಯ ಎಂದು ತಿಳಿಸಿದ್ದಾರೆ.
ಮಳೆ ಪೂರ್ತಿ ಕೈಕೊಟ್ಟಿದೆ. ಈ ವರ್ಷ ಭೀಕರ ಬರಗಾಲವನ್ನು ಎದುರಿಸುತ್ತಿದ್ದೇವೆ. ಈ ಮೂಲಕ ಜಲಾಶಯಗಳು ತುಂಬದೆ ನಾವೂ ಸಂಕಷ್ಟದ ವರ್ಷದಲ್ಲಿ ಇದ್ದೇವೆ. ಈಗ ಮತ್ತೆ ತಮಿಳುನಾಡಿಗೆ ನೀರು ಬಿಡಬೇಕೆಂಬ ಆದೇಶ ಹೊರ ಬಿದ್ದಿದೆ. ಆದರೆ ನಾವೂ ಕಾವೇರಿ ಪ್ರಾಧಿಕಾರ ಮತ್ತುಬಸಮಿತಿ ಎದುರು ನೀರು ಇಲ್ಲ, ಆದ್ದರಿಂದ ನೀರು ಬಿಡಲು ಸಾಧ್ಯವಿಲ್ಲ ಎಂದೇ ಬಲವಾಗಿ ಹೇಳಿದ್ದೇವೆ. ಈ ಮೊದಲು 5 ಸಾವಿರ ಕ್ಯೂಸೆಕ್ ನೀರು ಬಿಡಲು ಹೇಳಿದ್ದರು. ಬಳಿಕ 3 ಕ್ಯೂಸೆಕ್ ಬಿಡಲು ಹೇಳಿದ್ದರು. ಅದಕ್ಕೂ ನಾವೂ ಒಪ್ಪಲಿಲ್ಲ. ಈಗ ನಿನ್ನೆ ಮತ್ತೆ ಆದೇಶ ಬಂದಿದೆ. 2600 ಕ್ಯೂಸೆಕ್ ನೀರು ಬಿಡಲು ಸೂಚನೆ ನೀಡಲಾಗಿದೆ. ಆದರೆ ನಾವೂ ಮೊದಲು ಕುಡಿಯುವುದಕ್ಕೆ ಮತ್ತು ಬೆಳೆಯುವುದಕ್ಕೆ ಆದ್ಯತೆ ನೀಡುತ್ತೇವೆ. ನಾನೂ ಕೂಡ ರೈತ ಹೋರಾಟದಲ್ಲಿ ಬಂದಿರುವ ರೈತರ ಮಗ ಎಂದಿದ್ದಾರೆ.
ಇನ್ನು ಕಬ್ಬು ಬೆಳೆಗಾರರ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕಬ್ಬು ಬೆಳೆಗಾರರ ಹಿತಕ್ಕಾಗಿ ಮೈಶುಗರ್ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೇವೆ. ನಾವೂ ನಿಮ್ಮ ಪರವಾಗಿ ಇರುವವರು. ಅನುಮಾನ ಬೇಡವೇ ಬೇಡ. ನಮಗೆ ಅಧಿಕಾರಕ್ಕಿಂತ ರೈತರ ಹಿತವೇ ಮುಖ್ಯ ಎಂದಿದ್ದಾರೆ.