ಬೆಂಗಳೂರು.ಆಗಸ್ಟ್.4: ಜವಾಬ್ದಾರಿ ವಹಿಸಿರುವ ಜಿಲ್ಲೆಗಳಿಗೆ ತೆರಳಿ ಅತಿವೃಷ್ಟಿ, ಅನಾವೃಷ್ಟಿ ಪರಿಶೀಲಿಸಿ ವರದಿ ನೀಡಲು ನೂತನ ಸಚಿವರಿಗೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಬುಧವಾರದಿಂದಲೇ ನೂತನ ಸಚಿವರು ತಮಗೆ ಜವಾಬ್ದಾರಿ ವಹಿಸಿರುವ ಜಿಲ್ಲೆಗಳಿಗೆ ಭೇಟಿ ನೀಡಿ, ಅತಿವೃಷ್ಟಿ ಹಾಗೂ ಅನಾವೃಷ್ಟಿ ಪೀಡಿತ ಸ್ಥಳಗಳನ್ನು ಪರಿಶೀಲಿಸಬೇಕು. ಬಳಿಕ ಕಂದಾಯ ಸಚಿವರಿಗೆ ವರದಿ ಸಲ್ಲಿಸಬೇಕು ಎಂದು ಸಚಿವ ಸಂಪುಟ ಸಭೆಯಲ್ಲಿ ನಿರ್ದೇಶನ ನೀಡಲಾಗಿದೆ. ನಮ್ಮ ಮುಂದಿರುವ ಸವಾಲುಗಳು ಹಾಗೂ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.
ಬರಗಾಲ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ನೀರಿನ ಸಮಸ್ಯೆ ಬಗ್ಗೆಯೂ ಚರ್ಚೆಯಾಗಿದೆ. ಈಗ ಮಳೆಯಿಂದಾಗಿ ತಾತ್ಕಾಲಿಕವಾಗಿ ಸಮಸ್ಯೆ ನಿವಾರಣೆಯಾಗಿರಬಹುದು, ಆದರೆ ಭೀಕರ ಕಂಟಕವೊಂದು ಎದುರಾಗಿತ್ತು. ದೇವರ ಕೃಪೆಯಿಂದ ಸದ್ಯಕ್ಕೆ ಅದು ನಿವಾರಣೆಯಾಗಿದೆ. ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಹರಿಸುವಂತೆ ಸೂಚಿಸಲಾಗಿತ್ತು, ಆದರೆ ನಾವು 30 ಸಾವಿರ ಕ್ಯೂಸೆಕ್ ನೀರು ಹರಿಸುವಂತಾಗಿದೆ ಎಂದರು.
ನಾನು ಈಗಾಗಲೇ ಬೆಳಗಾವಿ, ಚಿತ್ರದುರ್ಗ, ಕಲಬುರಗಿ ವಿಭಾಗಗಳಲ್ಲಿ ಸಭೆ ನಡೆಸಿದ್ದು, ಮೈಸೂರು ವಿಭಾಗದ ಸಭೆಯನ್ನು ಶೀಘ್ರವೇ ನಡೆಸಲಾಗುವುದು. ಎಲ್ಲರ ಸಲಹೆ ಪಡೆಯಲಾಗಿದ್ದು, ಕುಡಿಯುವ ನೀರಿನ ಉದ್ದೇಶಕ್ಕಾಗಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸುಮಾರು 2 ಗಂಟೆಗಳ ಕಾಲ ಸಚಿವ ಸಂಪುಟದ ನೂತನ ಸದಸ್ಯರಿಗೆ ಮಾರ್ಗದರ್ಶನ ನೀಡಿದ್ದೇವೆ. ಇಂದು 19 ಸದಸ್ಯರ ಸೇರ್ಪಡೆಯೊಂದಿಗೆ ಸಂಪುಟ ವಿಸ್ತರಣೆಯಾಗಿದೆ. ನಮ್ಮಲ್ಲಿ ಸಾಕಷ್ಟು ಹಿರಿಯ ನಾಯಕರಿದ್ದರೂ ಈ ಬಾರಿ ಹೊಸ ಮುಖಗಳಿಗೆ ಅವಕಾಶ ನೀಡಿದ್ದೇವೆ. ನಮ್ಮಲ್ಲಿ ಅನೇಕ ಅರ್ಹರಿದ್ದಾರೆ. ಅರ್ಹತೆ ಇಲ್ಲದವರು ಯಾರೂ ಇಲ್ಲ, ಆದರೆ ಪಕ್ಷ ಎಲ್ಲವನ್ನೂ ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದಿದೆ. ಆಸೆ ಎಲ್ಲರಿಗೂ ಇರುತ್ತದೆ, ತಾಳ್ಮೆಯಿಂದ ಇದ್ದರೆ ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.
ರಾಜಕೀಯದಲ್ಲಿ ತಾಳ್ಮೆ ಬಹಳ ಮುಖ್ಯ. ಹಿಂದೆ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪನವರು ಸಚಿವ ಸಂಪುಟದಲ್ಲಿ ಇರಲಿಲ್ಲ. ಮಲ್ಲಿಕಾರ್ಜುನ ಖರ್ಗೆ, ಧರಂ ಸಿಂಗ್, ಲಕ್ಕಪ್ಪನವರು ಇರಲಿಲ್ಲ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ಅಜೀಜ್ ಸೇಠ್ ಅವರಿಗೂ ಸಂಪುಟದಲ್ಲಿ ಸ್ಥಾನ ಪಡೆಯಲು ಆಗಿರಲಿಲ್ಲ. ಧರಂ ಸಿಂಗ್ ಅವರ ಕಾಲದಲ್ಲಿ ನನ್ನನ್ನು ಹಾಗೂ ಪರಮೇಶ್ವರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರಲಿಲ್ಲ. ನಾವು ಬಹಳ ತಾಳ್ಮೆಯಿಂದ ಇದ್ದೆವು. ನಮ್ಮ ಆ ತಾಳ್ಮೆಗೆ ಇಂದು ಪಕ್ಷ ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದೆ, ಪರಮೇಶ್ವರ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡಿದೆ. ನಾವು ಶಾಸಕರ ಜೊತೆಯೂ ಚರ್ಚೆ ಮಾಡಿ, ಎಲ್ಲರಿಗೂ ಗೌರವ ನೀಡುತ್ತೇವೆ ಎಂದರು.
ಸಂಪುಟದಲ್ಲಿ ಇರುವುದು 33 ಸ್ಥಾನಗಳು ಮಾತ್ರ. ಎಸ್.ಎಂ. ಕೃಷ್ಣ ಅವರ ಕಾಲದಲ್ಲಿದ್ದಂತೆ ಎಷ್ಟು ಜನ ಬೇಕೋ ಅಷ್ಟು ಜನರನ್ನು ಮಂತ್ರಿ ಮಾಡುವ ಕಾಲ ಮುಗಿದಿದೆ. ಕೇವಲ ಶೇ. 15ರಷ್ಟು ಮಿತಿ ಹಾಕಲಾಗಿದೆ. ಮೇಲ್ಮನೆಯಿಂದ ಒಬ್ಬರು ಕಡ್ಡಾಯವಾಗಿ ಇರಲಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತ ಮಹಿಳೆಯರಿಗೆ ಆದ್ಯತೆ ನೀಡುವುದಾಗಿದೆ. ಈಗಾಗಲೇ ಮಹಿಳೆಗೆ ಉಪಸಭಾಪತಿ ಸ್ಥಾನ ನೀಡಿದ್ದೇವೆ, ಸಚಿವ ಸಂಪುಟದಲ್ಲೂ ಒಂದು ಸ್ಥಾನವನ್ನು ಮಹಿಳೆಯರಿಗೆ ನೀಡಲಾಗುವುದು. ಈ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.
ಕಾವೇರಿ ವಿಚಾರದಲ್ಲಿ ತಮಿಳುನಾಡು ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮಾಹಿತಿ ಬಂದಿದ್ದು, ಕಾನೂನು ತಜ್ಞರ ಜೊತೆ ಚರ್ಚಿಸಿ ಅವರಿಗೆ ಕಾನೂನಾತ್ಮಕವಾಗಿಯೇ ಉತ್ತರ ನೀಡಲಾಗುವುದು. ಈ ವಿಚಾರದಲ್ಲಿ ನಮಗೆ ಬಿಜೆಪಿ ಹಾಗೂ ಜೆಡಿಎಸ್ ಸಹಕಾರ ನೀಡಿವೆ ಮತ್ತು ಇಡೀ ಕರ್ನಾಟಕ ಒಗ್ಗಟ್ಟಾಗಿ ನಿಂತಿದೆ. ಭವಿಷ್ಯದಲ್ಲೂ ಅವರು ನಮ್ಮ ಜೊತೆ ನಿಲ್ಲುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












