ಸುದ್ದಿಒನ್, ಚಿತ್ರದುರ್ಗ, ಜುಲೈ. 04 : ನಗರದ ರಾಂದಾಸ್ ಕಾಂಪೌಂಡ್ ನಲ್ಲಿ ಮುಂಜಾನೆ ವೇಳೆಯಲ್ಲಿ ನೀರು ಭಾರಿ ಪ್ರಮಾಣದಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ನೀರು ಪೋಲಾಗುವುದನ್ನು ತಡೆಯಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಾಂದಾಸ್ ಕಾಂಪೌಂಡ್ ನಲ್ಲಿ ಮುಂಜಾನೆ ವೇಳೆ ನೀರು ನಿರಂತರವಾಗಿ ವ್ಯರ್ಥವಾಗಿ ಹರಿದು ಚರಂಡಿ ಸೇರುತ್ತಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ಉಪಯೋಗವಾಗುತ್ತಿಲ್ಲ. ಈ ಗಂಭೀರ ಸಮಸ್ಯೆಯ ಕುರಿತು ಸ್ಥಳೀಯರು ಈಗಾಗಲೇ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ಹನಿ ನೀರಿಗೂ ಹಾಹಾಕಾರ ಪಡುವಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಷ್ಟೊಂದು ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಪೋಲಾಗುತ್ತಿರುವುದು ಎಷ್ಟು ಸರಿ? ಎಂದು ಅವರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದುರ್ಗ ನಗರಕ್ಕೆ ದೂರದ ಶಾಂತಿಸಾಗರ ಹಾಗೂ ವಾಣಿ ವಿಲಾಸ ಸಾಗರ ಜಲಾಶಯಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಇಷ್ಟು ಕಷ್ಟಪಟ್ಟು ತರುವ ನೀರನ್ನು ಹೀಗೆ ಬೇಜವಾಬ್ದಾರಿತನದಿಂದ ವ್ಯರ್ಥ ಮಾಡುವುದು ಎಷ್ಟು ಸರಿ ಎಂದು ಪ್ರಜ್ಞಾವಂತರು ಪ್ರಶ್ನಿಸುತ್ತಿದ್ದಾರೆ. ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿ, ಪೋಲಾಗುತ್ತಿರುವ ನೀರನ್ನು ಉಳಿಸಿ ಅಗತ್ಯವಿರುವ ಕಡೆ ಬಳಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.


















