ಸುದ್ದಿಒನ್, ಚಿತ್ರದುರ್ಗ, ಜುಲೈ. 29 : ಅಪ್ರಾಪ್ತ ಬಾಲಕನಿಗೆ ಚಾಲನಾ ಪರವಾನಗಿ ಹಾಗೂ ವಿಮೆ ಇಲ್ಲದ ಸ್ಕೂಟಿ ಚಾಲನೆಗೆ ನೀಡಿ, ಅಪಘಾತಕ್ಕೆ ಕಾರಣನಾಗಿದ್ದ ವಾಹನ ಮಾಲೀಕನಿಗೆ ನ್ಯಾಯಾಲಯವು ದಂಡ ಹಾಗೂ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಚಿತ್ರದುರ್ಗದ ವಾಸಿ ವಿಜಯಭಾಸ್ಕರ್ ಎಸ್.ಎನ್. (ಬಿನ್ ನಟರಾಜ್) ಶಿಕ್ಷೆಗೆ ಒಳಗಾದ ವಾಹನ ಮಾಲೀಕರಾಗಿದ್ದಾರೆ. ಪ್ರಧಾನ ಸಿ. ಜೆ. ಮತ್ತು ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಮಮತ ಡಿ. ರವರು ಪ್ರಕರಣದ ವಿಚಾರಣೆ ನಡೆಸಿ ದಿನಾಂಕ 28.07.2026 ರಂದು ಈ ತೀರ್ಪು ಪ್ರಕಟಿಸಿದ್ದಾರೆ. ದಿನಾಂಕ 24.11.2024 ರಂದು ಬೆಳಿಗ್ಗೆ 7:30 ರ ಸುಮಾರಿಗೆ ಚಿತ್ರದುರ್ಗದ ಅಪ್ರಾಪ್ತ ಬಾಲಕನೊಬ್ಬ ವಿಜಯಭಾಸ್ಕರ್ ಅವರಿಗೆ ಸೇರಿದ ಕೆಎ 16 ಇಎಕ್ಸ್ 3444 ನೋಂದಣಿ ಸಂಖ್ಯೆಯ ಸ್ಕೂಟಿಯಲ್ಲಿ ಸಮರ್ಧ ಮತ್ತು ಚಿನ್ಮಯಿ ಎಂಬಿಬ್ಬರನ್ನು ಹಿಂಬದಿ ಸವಾರರನ್ನಾಗಿ ಕೂರಿಸಿಕೊಂಡು ಚಲಾಯಿಸುತ್ತಿದ್ದನು.
ಹಳೇ ಬೆಂಗಳೂರು ರಸ್ತೆಯ ಚಳ್ಳಕೆರೆ ಗೇಟ್ ಸರ್ಕಲ್ ಬಳಿಯ ಉಪಾಧ್ಯ ಹೋಟೆಲ್ ಹತ್ತಿರ ಅತಿವೇಗ ಹಾಗೂ ಅಜಾಗರೂಕತೆಯಿಂದ ಸ್ಕೂಟರ್ ಚಲಾಯಿಸಿಕೊಂಡು ಬಂದ ಬಾಲಕ, ಅಲ್ಲಿ ಆಟೋಗಾಗಿ ಕಾಯುತ್ತಿದ್ದ ಗುರುಮೂರ್ತಿ ಎಂಬುವರಿಗೆ ಡಿಕ್ಕಿ ಹೊಡೆದಿದ್ದನು. ಪರಿಣಾಮವಾಗಿ ಗುರುಮೂರ್ತಿ ಅವರ ಮೈಕೈಗೆ ತೀವ್ರ ಸ್ವರೂಪದ ಗಾಯಗಳಾಗಿದ್ದವು. ಸ್ಕೂಟಿಗೆ ವಿಮೆ ಇಲ್ಲದಿರುವುದು ಮತ್ತು ಚಾಲನಾ ಪರವಾನಗಿ ಇಲ್ಲದ ಅಪ್ರಾಪ್ತ ಬಾಲಕನಿಗೆ ವಾಹನ ಚಾಲನೆ ಮಾಡಲು ನೀಡಿದ್ದು ತನಿಖೆಯಲ್ಲಿ ದೃಢಪಟ್ಟಿತ್ತು. ಈ ಕುರಿತು ಚಿತ್ರದುರ್ಗ ಸಂಚಾರಿ ಪೊಲೀಸ್ ಠಾಣೆಯ ಹೆಚ್.ಸಿ. ಸ್ವಾಮಿ ಎಸ್.ಬಿ. ರವರು ಸಂಪೂರ್ಣ ತನಿಖೆ ನಡೆಸಿ, ವಾಹನ ಮಾಲೀಕ ವಿಜಯಭಾಸ್ಕರ್ ಎಸ್.ಎನ್. ಬಿನ್ ನಟರಾಜ್ ವಿರುದ್ಧ ಐಎಂವಿ ಆಕ್ಟ್ (IMV Act) ಕಲಂ 196, 180, 199(ಎ) ರಡಿಯಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಮಮತ ಡಿ. ರವರು ಆರೋಪಿಗೆ ಒಂದು ದಿನ ನ್ಯಾಯಾಲಯದ ಕಲಾಪ ಮುಗಿಯುವವರೆಗೆ ನ್ಯಾಯಾಲಯದಲ್ಲಿ ಕುಳಿತುಕೊಳ್ಳುವ ಶಿಕ್ಷೆ ಹಾಗೂ ಮೂವತ್ತು ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 60 ದಿನಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಚಿತ್ರದುರ್ಗದ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕರಾದ ಸಿ. ಮಂಜುನಾಥ ಅವರು ವಾದ ಮಂಡಿಸಿದ್ದರು.










