Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

​ಚಿತ್ರದುರ್ಗ: ವಾಸವಿ ಮಹಿಳಾ ಸಂಘದ ‘ಶ್ರೀ ವಾಸವಿ ಸೌಗಂಧಿಕಾ’ ಸ್ಮರಣ ಸಂಚಿಕೆ ಲೋಕಾರ್ಪಣೆ

---Advertisement---

ಚಿತ್ರದುರ್ಗ : ಕ್ರಿಯಾಶೀಲತೆಗೆ ಮತ್ತೊಂದು ಹೆಸರಾಗಿರುವ ನಮ್ಮೂರ ವಾಸವಿ ಮಹಿಳಾ ಸಂಘವು ಅನೇಕ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಇಂದು ಜ್ಞಾನದ ಗಣಿಯಾಗಿರುವ ಮೌಲಿಕವಾದ ‘ಶ್ರೀ ವಾಸವಿ ಸೌಗಂಧಿಕಾ’ ಸ್ಮರಣ ಸಂಚಿಕೆಯನ್ನು ಪ್ರಕಟಿಸಿರುವುದು ಅತ್ಯಂತ ಶ್ಲಾಘನೀಯ ಎಂದು ಆರ್ಯವೈಶ್ಯ ಸಂಘದ ಅಧ್ಯಕ್ಷರಾದ ಎಲ್.ಇ. ಶ್ರೀನಿವಾಸ ಬಾಬು ಅವರು ಅಭಿಪ್ರಾಯಪಟ್ಟರು.

​ನಗರದ ಕನ್ಯಕಾ ಮಹಲ್‌ನಲ್ಲಿ ನಡೆದ ಸ್ಮರಣ ಸಂಚಿಕೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆ ಎಂದಿಗೂ ಅಬಲಳಲ್ಲ, ಆಕೆ ಸಬಲಳೇ ಹೌದು ಎಂದು ಪ್ರತಿಪಾದಿಸಿದರು.

​ಕರ್ನಾಟಕ ಆರ್ಯವೈಶ್ಯ ಮಹಾಸಭಾ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ವತ್ಸಲ ಮದನ್ ಅವರು ಸ್ಮರಣ ಸಂಚಿಕೆಯ ರಕ್ಷಾಪುಟವನ್ನು ಅನಾವರಣಗೊಳಿಸಿ, ಅದರಲ್ಲಿ ಅಡಕಗೊಂಡಿರುವ ವಿಶಿಷ್ಟಾರ್ಥಗಳನ್ನು ಸಭಿಕರಿಗೆ ಮನವರಿಕೆ ಮಾಡಿಕೊಟ್ಟರು.
​ಅಖಿಲ ಕರ್ನಾಟಕ ಆರ್ಯವೈಶ್ಯ ಮಹಿಳಾ ಮಹಾಸಭಾ ಅಧ್ಯಕ್ಷರಾದ ಉಮಾ ಸಾಯಿರಾಂ ಅವರು ಸಂಚಿಕೆಯನ್ನು ಲೋಕಾರ್ಪಣೆ ಮಾಡಿ ಮಾತನಾಡಿ, ಕೋಟೆ ನಾಡಿನ ವಾಸವಿ ಮಹಿಳಾ ಸಂಘದ ಸಾಧನೆಗಳನ್ನು ಮುಕ್ತಕಂಠದಿಂದ ಸ್ತುತಿಸಿದರು. ಇದೇ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಆರ್ಯವೈಶ್ಯ ಸಮುದಾಯವು ಇನ್ನಷ್ಟು ಪ್ರವರ್ದಮಾನಕ್ಕೆ ಬರಲು ಅಗತ್ಯವಾದ ಬೃಹತ್ ವೇದಿಕೆಯೊಂದನ್ನು ಇಷ್ಟರಲ್ಲಿಯೇ ಬೆಂಗಳೂರಿನಲ್ಲಿ ಉದ್ಘಾಟಿಸಲಿರುವುದಾಗಿ ಅವರು ಪ್ರಕಟಿಸಿದರು.

​ಸ್ಮರಣ ಸಂಚಿಕೆ ಕುರಿತು ಆಶಯ ನುಡಿಗಳನ್ನಾಡಿದ ಪ್ರೊ. ಟಿ.ವಿ. ಸುರೇಶಗುಪ್ತ ಅವರು, “ಯಾವುದೇ ಒಂದು ಸಂಘ ಸಂಸ್ಥೆ ನಡೆದು ಬಂದ ದಾರಿ ಹಾಗೂ ಅದರ ಇತಿಹಾಸವನ್ನು ದಾಖಲಿಸುವ ಅತ್ಯಂತ ಉತ್ತಮ ವಿಧಾನವೆಂದರೆ ಅದು ಸ್ಮರಣ ಸಂಚಿಕೆಯ ಪ್ರಕಟಣೆ. ಹಿಂದಿನ ಹೆಜ್ಜೆಗಳನ್ನು ಅರಿಯದೆ ಮುಂದಿನ ಮುನ್ನಡೆ ಅಥವಾ ಪ್ರಗತಿಯನ್ನು ಸಾಧಿಸುವುದು ಕಷ್ಟಕರ” ಎಂದರು. ಮುಂದುವರಿದು, ಈ ಸಂಚಿಕೆಯಲ್ಲಿ ಕಳೆದ 45 ವರ್ಷಗಳಿಂದ ಸಂಘ ನಡೆದು ಬಂದ ದಾರಿಯ ದರ್ಶನವಿದೆ, ಇತಿಹಾಸದ ಸಂಕಥನವಿದೆ ಹಾಗೂ ಹಲವಾರು ಅಪರೂಪದ ಕಾರ್ಯಕ್ರಮಗಳ ಛಾಯಾಚಿತ್ರ ಸಂಗ್ರಹವೂ ಇದೆ. ಮಹಾಭಾರತದ ಪ್ರಸಂಗದಲ್ಲಿ ಬರುವ ಸೌಗಂಧಿಕಾ ಪುಷ್ಪದ ಸ್ಮರಣೆಯ ನಂಟು ಈ ಸಂಚಿಕೆಗೆ ಇದೆ ಎಂದು ವಿವರಿಸಿದರು.

 

​ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರತಿಭಾ ಕುಸುಮ ತ್ರೈಮಾಸಿಕ ಪತ್ರಿಕೆಯ ಸಂಪಾದಕಿ ಲತಾ ಶ್ರೀನಿವಾಸ್ ಅವರು ಮಾತನಾಡಿ, ವೀರವನಿತೆ ಒನಕೆ ಓಬವ್ವಳ ಛಾತಿ ದುರ್ಗದ ವನಿತೆಯರಲ್ಲಿ ಇಂದು ಜಾಗೃತವಾಗಿದೆ. ಅವರಲ್ಲಿರುವ ಸಶಕ್ತ ಭಾವನೆಗಳು ಈ ಸಂಚಿಕೆಯಲ್ಲಿ ಅಚ್ಚುಕಟ್ಟಾಗಿ ಹುದುಗಿದೆ ಎಂದರು. ಮತ್ತೋರ್ವ ಮುಖ್ಯ ಅತಿಥಿ ಎಂ.ಹೆಚ್. ಪ್ರಾಣೇಶ್ ಅವರು ಮಾತನಾಡಿ, ರಜತ ವರ್ಷದಿಂದ ಬಂಗಾರದ ವರ್ಷದ ಸಂಭ್ರಮದತ್ತ ಯಶಸ್ವಿಯಾಗಿ ಸಾಗುತ್ತಿರುವ ವಾಸವಿ ಮಹಿಳಾ ಸಂಘವು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸಲಿ ಎಂದು ಆಶಿಸಿದರು.

 

​ಕಾರ್ಯಕ್ರಮದ ಆರಂಭದಲ್ಲಿ ವಾಸವಿ ಮಹಿಳಾ ಸಂಘದ ಅಧ್ಯಕ್ಷರಾದ ಸರ್ವದ ಸುರೇಶಗುಪ್ತ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ನಮ್ಮ ನಿರಂತರ ಪ್ರಯತ್ನದ ಜೊತೆಗೆ ಸಮಾಜ ಬಾಂಧವರ ಸಕಾಲಿಕ ಸಹಕಾರ ಎಲ್ಲಾ ಹಂತಗಳಲ್ಲಿಯೂ ನಮಗೆ ದೊರೆತಿದೆ. ಹೀಗಾಗಿಯೇ ನಾವು ಯಶಸ್ವಿಯಾಗಿದ್ದೇವೆ. ಎರಡು ಕೈಗಳು ಸೇರಿದರೆ ಮಾತ್ರ ಚಪ್ಪಾಳೆಯ ಸದ್ದು ಕೇಳಿಬರಲು ಸಾಧ್ಯ ಎಂದು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ವಾಸವಿ ವಿದ್ಯಾಭಿವೃದ್ಧಿ ಯೋಜನೆ’ಯಡಿಯಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಮಾಡಲಾಯಿತು. ಇದಲ್ಲದೆ, ಸಂಘವನ್ನು ಕಟ್ಟಿಬೆಳೆಸಿದ ಹಿಂದಿನ ಎಲ್ಲಾ ಮಾಜಿ ಅಧ್ಯಕ್ಷರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

​ಕಾರ್ಯಕ್ರಮದ ಆರಂಭದಲ್ಲಿ ಸೌಮ್ಯ ಮಂಜುನಾಥ್ ಹಾಗೂ ಸವಿತ ದಿವಾಕರ್ ಅವರು ಪ್ರಾರ್ಥಿಸಿದರು. ಸುಧಾ ಮಂಜುನಾಥ್ ಅವರು ಸ್ವಾಗತ ಕೋರಿದರು. ಲಕ್ಷ್ಮಿ ರಮಾಕಾಂತ್ ಅವರ ವಂದನಾರ್ಪಣೆಯೊಂದಿಗೆ ಸಮಾರಂಭವು ಸಂಪನ್ನಗೊಂಡಿತು. ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಪ್ರತಿಭಾ ವಿಶ್ವನಾಥ್ ಹಾಗೂ ಗೀತಾ ಅಶ್ವಥನಾರಾಯಣ್ ಅವರು ಅತ್ಯಂತ ಯಶಸ್ವಿಯಾಗಿ ನಡೆಸಿಕೊಟ್ಟರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now