ಚಿತ್ರದುರ್ಗ : ನೋಡೋಕೆ ಸುಂದರವಾಗಿದ್ದ ಹುಡುಗಿ. ಈ ವರ್ಷ ಮುಗಿದಿದ್ದರೆ ಡಿಗ್ರಿ ಮುಗೀತಾ ಇತ್ತು. ಆಡೋರ ಮಾತಿಗೆಲ್ಲಾ ಕಿವಿಕೊಡದೆ ಹೋಗಿದ್ದರೆ ಪದವೀಧರೆಯಾಗಿ, ಅಪ್ಪ ಅಮ್ಮನ ಕನಸಿಗೆ ರೆಕ್ಕೆ ಕಟ್ಟಿ, ಅವಳು ಹಾರುತ್ತಿದ್ದಳು. ಆದರೆ ಬೇಡದ ಮಾತುಗಳಿಗೆ ಕಿವಿಕೊಟ್ಟು ಇಂದು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇದಕ್ಕೆ ಹೊಣೆ ಯಾರೂ ಹೇಳಿ. ಈ ವಿದ್ಯಾರ್ಥಿನಿ ಪ್ರಾಣ ಬಿಡೋಕೆ ಕಾರಣ ಕಾಲೇಜಿನಲ್ಲಿ ಹಬ್ಬಿಸಿದ್ದ ಗಾಸಿಪ್. ಲೆಕ್ಚರರ್ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಮಾತು.
ಹೌದು, ಲಿಖಿತಾಗೆ ಈಗಿನ್ನು 22 ವರ್ಷ. ಮಲ್ಲಾಡಿಹಳ್ಳಿಯಲ್ಲಿರುವ ಆಯುರ್ವೇದ ಕಾಲೇಜಿನಲ್ಲಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡ್ತಾ ಇದ್ದರು. ಬಿಎಂಎಸ್ ವ್ಯಾಸಂಗ ಮಾಡ್ತಾ ಇದ್ದರು. ಅದೇ ಕಾಲೇಜಿನ ಉಪನ್ಯಾಸಕರಾಗಿದ್ದ ಡಾ.ರಾಜು ಅವರೊಂದಿಗೆ ಲಿಖಿತಾ ಸಂಬಂಧ ಹೊಂದಿದ್ದಾಳೆ ಎಂಬ ಅಪಪ್ರಚಾರ ಕಾಲೇಜಿನಲ್ಲಿ ಜೋರಾಗಿಯೇ ಹಬ್ಬಿತ್ತು. ಆಕೆಯ ಸಹಪಾಠಿಗಳೇ ಅದನ್ನ ಹಬ್ಬಿಸಿದ್ದರು. ಈ ಸುದ್ದಿ ಡಾ.ರಾಜು ಅವರ ಪತ್ನಿಯ ತನಕವೂ ಹೋಗಿತ್ತು. ಇದನ್ನೇ ನಂಬಿದ್ದ ನಿಶಾ, ಕಾಲೇಜಿಗೂ ಬಂದು ಗಲಾಟೆ ಮಾಡಿದ್ದರು.
ಕಾಲೇಜಿಗೆ ಬಂದಿದ್ದ ನಿಶಾ, ಇಡೀ ಕಾಲೇಜು ನೋಡುವಂತೆ ಲಿಖಿತಾ ವಿರುದ್ಧ ಕೂಗಾಡಿದ್ದರು, ರಂಪಾಟ ಮಾಡಿದ್ದರು. ಇದರಿಂದ ನೊಂದ ಲಿಖಿತಾ ಪ್ರಾಣ ಕಳೆದುಕೊಂಡಿದ್ದಾಳೆ. ತನ್ನ ಮನೆಯಲ್ಲಿಯೇ ಪ್ರಾಣ ಕಳೆದುಕೊಂಡಿದ್ದಾಳೆ. ಅದಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾಳೆ. ವಿಷಯ ತಿಳಿದು ಚಿತ್ರದುರ್ಗದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಘಟನೆ ಸಂಬಂಧ ದೂರು ದಾಖಲಾಗಿದೆ. ಡೆತ್ ನೋಟ್ ಬರೆದಿರುವ ಕಾರಣ, ಪೊಲೀಸರು ಅವರನ್ನ ತನಿಖೆಯನ್ನು ನಡೆಸಲಿದ್ದಾರೆ.















