ಸುದ್ದಿಒನ್, ಏಪ್ರಿಲ್. 18 :
ಚಿತ್ರದುರ್ಗದ ಮಾರಗಟ್ಟದಲ್ಲಿ ಇಲ್ಲಿಯವರೆಗೆ ಕಾರ್ಯನಿರ್ವಹಿಸುತ್ತಿದ್ದ “ರೇಷ್ಮೆ ಕೃಷಿ ಸಂಶೋಧನಾ ವಿಸ್ತರಣ ಕೇಂದ್ರವನ್ನು” “ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನಾಗಿ” ಮೇಲ್ದರ್ಜೆಗೇರಿಸಿ ಕೇಂದ್ರ ಸರ್ಕಾರದ ಕೇಂದ್ರ ರೇಷ್ಮೆ ಮಂಡಳಿ ಆದೇಶ ಹೊರಡಿಸಿದೆ. ಇತ್ತಿಚಿಗೆ ನಡೆದ ಕೇಂದ್ರ ರೇಷ್ಮೆ ಮಂಡಳಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

1982 ರಲ್ಲಿ ಪ್ರಾರಂಭವಾದ ಚಿತ್ರದುರ್ಗ ತಾಲ್ಲೂಕಿನ ಮಾರಗಟ್ಟದಲ್ಲಿರುವ ರೇಷ್ಮೆ ಸಂಶೋಧನಾ ವಿಸ್ತರಣ ಕೇಂದ್ರವು ಚಿತ್ರದುರ್ಗ, ಬಳ್ಳಾರಿ ಮತ್ತು ದಾವಣಗೆರೆ ಈ ಮೂರು ಜಿಲ್ಲೆಗಳ ರೇಷ್ಮೆ ಬೆಳೆಗಾರರ ಅಗತ್ಯತೆಗಳನ್ನು ಪೂರೈಸುತ್ತಿತ್ತು.
ಇತ್ತಿಚಿಗೆ ನಡೆದ ಕೇಂದ್ರ ರೇಷ್ಮೆ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಧಾರದಂತೆ ಬೆಂಗಳೂರಿನ ಸರ್ಜಾಪುರದ ಬಳಿಯ ಕೊಡತಿಯಿಂದ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವನ್ನು ಚಿತ್ರದುರ್ಗದ ಮಾರಗಟ್ಟಕ್ಕೆ ಸ್ಥಳಾಂತರಿಸಿ ಮೇಲ್ದರ್ಜೆಗೇರಿಸಲಾಗಿದೆ. ಚಿತ್ರದುರ್ಗದ ಮಾರಗಟ್ಟದಲ್ಲಿದ್ದ ಸಂಶೋಧನಾ ವಿಸ್ತರಣಾ ಕೇಂದ್ರವನ್ನು ಹಾವೇರಿ ಜಿಲ್ಲೆಯ ರಾಣೇಬೆನ್ನೂರಿಗೆ ಸ್ಥಳಾಂತರಿಸಲಾಗಿದೆ.
ಪ್ರಸ್ತುತ ಚಿತ್ರದುರ್ಗದ ಪ್ರಾದೇಶಿಕ ರೇಷ್ಮೆ ಕೃಷಿ ಸಂಶೋಧನಾ ಕೇಂದ್ರವು ಇದೇ ತಿಂಗಳಾಂತ್ಯದಿಂದ ತಾಂತ್ರಿಕವಾಗಿ ಹಾಗೂ ಆಡಳಿತಾತ್ಮಕವಾಗಿ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ. ಚಿತ್ರದುರ್ಗದ ಈ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರವು 10 ಉಪ-ಘಟಕಗಳ (ಸಂಶೋಧನಾ ಕೇಂದ್ರಗಳು) ತಾಂತ್ರಿಕ ಚಟುವಟಿಕೆಗಳನ್ನು ಮತ್ತು ಉತ್ತರ ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ 03 ಘಟಕಗಳನ್ನು ಅಂದರೆ, ರಾಣೇಬೆನ್ನೂರು, ಕೊಪ್ಪಳ ಮತ್ತು ಬೀದರ್‍ನಲ್ಲಿರುವ ಸಂಶೋಧನಾ ವಿಸ್ತರಣ ಕೇಂದ್ರಗಳನ್ನು ಸಮನ್ವಯಗೊಳಿಸುತ್ತದೆ. ಇದರ ಜೊತೆಗೆ ದಕ್ಷಿಣ ಕರ್ನಾಟಕದ ಎರಡು ಘಟಕಗಳಾದ ಮದ್ದೂರು ಮತ್ತು ಮಡಿವಾಳ ಘಟಕಗಳೂ ಸಹ ಚಿತ್ರದುರ್ಗ ಕೇಂದ್ರದ ವ್ಯಾಪ್ತಿಗೆ ಒಳಪಡುತ್ತವೆ. ಇದರ ಜೊತೆಗೆ ಮಹರಾಷ್ಟ್ರದ ನಾಲ್ಕು ಮತ್ತು ಮಧ್ಯಪ್ರದೇಶದ ಒಂದು ರೇಷ್ಮೆ ವಿಸ್ತರಣಾ ಕೇಂದ್ರಗಳು ಚಿತ್ರದುರ್ಗದ ಕೇಂದ್ರದ ವ್ಯಾಪ್ತಿಗೆ ಒಳಪಡಲಿವೆ.
ಚಿತ್ರದುರ್ಗ ಜಿಲ್ಲೆಯಲ್ಲಿ 288 ಹಳ್ಳಿಗಳಲ್ಲಿ ಸುಮಾರು 3800 ಕ್ಕಿಂತ ಹೆಚ್ಚು ರೇಷ್ಮೆ ಬೆಳೆಗಾರರಿದ್ದು, ಅಂದಾಜು 111.49 ಮೆಟ್ರಿಕ್ ಟನ್‍ನಷ್ಟು ಕಚ್ಚಾ ರೇಷ್ಮೆ ಉತ್ಪಾದನೆಯಾಗುತ್ತಿದೆ. ಚಿತ್ರದುರ್ಗದಲ್ಲಿ ಪ್ರಾದೇಶಿಕ ರೇಷ್ಮೆ ಸಂಶೋಧನಾ ಕೇಂದ್ರ ಸ್ಥಾಪನೆಯಾಗುತ್ತಿರುವುದರಿಂದ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಉತ್ತೇಜನ ಮತ್ತು ಪ್ರೇರಣೆ ದೊರೆಯಲಿದೆ, ಬೈವೋಲ್ಟೈನ್ ರೇಷ್ಮೆಯ ಉತ್ಪಾದನೆ, ಉತ್ಪಾದಕತೆ ಮತ್ತು ಗುಣಮಟ್ಟವನ್ನು ಹೆಚ್ಚಿಸಲು ಈ ಕೇಂದ್ರ ಸಹಕಾರಿಯಾಗಲಿದೆ, ಉತ್ತಮ ತಂತ್ರಜ್ಞಾನ ವರ್ಗಾವಣೆ, ಪಾಲುದಾರರಿಗೆ ತರಬೇತಿ ನೀಡುವುದು, ಕೀಟ ಮತ್ತು ರೋಗಗಳ ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ನೀಡುವುದನ್ನೂ ಸಹ ಈ ಕೇಂದ್ರ ಮಾಡಲಿದೆ. ಗೂಡುಗಳ ಮಾರಾಟಕ್ಕಾಗಿ ಮಾರುಕಟ್ಟೆ ಮೂಲಸೌಕರ್ಯ ಸೃಜನೆಯಾಗಲಿವೆ. ಈ ಪ್ರದೇಶದಲ್ಲಿ ಬೃಹತ್ ಪ್ರಮಾಣದ ರೇಷ್ಮೆ ಕೃಷಿಗೆ ಅವಕಾಶ ಒದಗಿಬರಲಿದೆ ಎಂದು ಸಂಸದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

















