ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 04 : ಚಲಿಸುತ್ತಿದ್ದ ಬಸ್ ಡಿಕ್ಕಿಯಾಗಿ ಓರ್ವನಿಗೆ ಗಾಯವಾದ ಘಟನೆ ನಗರದ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ಸಂಭವಿಸಿದೆ.
ಇಂದು ಬೆಳಿಗ್ಗೆ 9 : 45ರ ವೇಳೆಗೆ ಪ್ರಧಾನ ಅಂಚೆ ಕಚೇರಿ ರಸ್ತೆಯಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್ ನ ಬ್ರೇಕ್ ಫೇಲ್ ಆಗಿ ಮುಂದಿದ್ದ ಆಟೋಗೆ ಡಿಕ್ಕಿ ಹೊಡೆದಿದೆ. ಈ ಆಟೋ ಮುಂದೆಯೇ ಇದ್ದ ಮತ್ತೊಂದು ಬಸ್ ಗೆ ಡಿಕ್ಕಿ ಹೊಡೆದಿದೆ. ಈ ಎರಡೂ ಬಸ್ ಗಳ ಮಧ್ಯೆ ಸಿಲುಕಿದ ಆಟೋ ನುಜ್ಜುಗುಜ್ಜಾಗಿದೆ. ಆಟೋದಲ್ಲಿದ್ದ ಚಾಲಕ ಮತ್ತು ಪ್ರಯಾಣಿಕರಿಗೆ ಗಾಯಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಪ್ರಾಣಾಪಾಯವಾಗಿಲ್ಲ. ಪಾದಚಾರಿಗಳಿಗೂ ಯಾವುದೇ ತೊಂದರೆಯಾಗಿಲ್ಲ. ಇದರಿಂದ ಸಂಭವನೀಯ ದುರಂತಯೊಂದು ತಪ್ಪಿದಂತಾಗಿದೆ. ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.










