Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ: ಕನಿಷ್ಠ ವೇತನ, ಸೇವಾ ಭದ್ರತೆಗೆ ಆಗ್ರಹಿಸಿ ಸರ್ಕಾರಿ ಹಾಸ್ಟೆಲ್, ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

---Advertisement---

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 17 : ಕನಿಷ್ಟ ವೇತನ ಜಾರಿಗೊಳಿಸಿ ಸೇವಾ ಭದ್ರತೆ ಒದಗಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಉಪ ವಿಭಾಗಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ಹುದ್ದೆ ಖಾಯಂಗಾಗಿ ಒತ್ತಾಯಿಸಿದರು.

ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಹನುಮೇಗೌಡ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡುತ್ತ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಪರಿಶಿಷ್ಟ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಕಳೆದ 15-20 ವರ್ಷಗಳಿಂದಲೂ ಕಡಿಮೆ ಸಂಬಳಕ್ಕಾಗಿ ದುಡಿಯುತ್ತಿದ್ದಾರೆ. ಯಾವುದೇ ಜೀವನ ಭದ್ರತೆಯಿಲ್ಲ. ವಸತಿ ನಿಲಯ, ಶಾಲಾ-ಕಾಲೇಜುಗಳಲ್ಲಿ ಅಡುಗೆಯವರು, ಅಡುಗೆ ಸಹಾಯಕರು, ಸ್ವಚ್ಚತಾಗಾರರು, ಕಾವಲುಗಾರರು, ಡಿ.ಗ್ರೂಪ್
ಅಟೆಂಡರ್, ಕಂಪ್ಯೂಟರ್ ಆಪರೇಟರ್, ಡಾಟಾ ಎಂಟ್ರಿ ಆಪರೇಟರ್‍ಗಳು ಹೊರ ಗುತ್ತಿಗೆ ಅತಿಥಿ ಶಿಕ್ಷಕರುಗಳು ಕೆಲಸ ಮಾಡುತ್ತಿದ್ದಾರೆ. ಅವರುಗಳನ್ನೆಲ್ಲಾ ಖಾಯಂಗೊಳಿಸಿ ಕನಿಷ್ಟ ವೇತನ ನೀಡಬೇಕೆಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಯಶವಂತ್ ಪ್ರತಿಭಟನೆಯನ್ನುದೇಶಿಸಿ ಮಾತನಾಡಿ ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರ ಹಾಗೂ ಕಾರ್ಮಿಕ ಇಲಾಖೆ ವೇತನ ಪರಿಷ್ಕರಣೆ ಕುರಿತು ಕರಡು ಅಂತಿಮ ಅಧಿಸೂಚನೆ ಹೊರಡಿಸಿದ್ದು, ವಿಳಂಬ ಮಾಡದೆ ಕನಿಷ್ಟ ವೇತನವನ್ನು ತಕ್ಷಣ ನೀಡಬೇಕು. ತಿಂಗಳಿಗೆ ಕನಿಷ್ಟ 36 ಸಾವಿರ ರೂ.ಗಳ ವೇತನ ಕೊಡಬೇಕು. ಎಲ್ಲಾ ಹಾಸ್ಟೆಲ್ ಮತ್ತು ವಸತಿ ನಿಲಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನಿವೃತ್ತಿಯವರೆಗೂ ಸೇವಾ ಭದ್ರತೆ ಒದಗಿಸಿ ಕೆಲಸ ಮಾಡುವ ಸ್ಥಳಗಳಲ್ಲಿಯೇ ಖಾಯಂಗೊಳಿಸಿ ನೇರವಾಗಿ ಇಲಾಖೆಯಿಂದ ವೇತನ ಪಾವತಿಸಬೇಕು. ಗುತ್ತಿಗೆದಾರರು ಸಂಬಳದ ಚೀಟಿ, ನೇಮಕಾತಿ ಆದೇಶ ಪತ್ರ, ಐ.ಡಿ.ಕಾರ್ಡ್, ಸರ್ವಿಸ್ ಸರ್ಟಿಫಿಕೇಟ್, ಇಎಸ್‍ಐ. ಮತ್ತು ಪಿ.ಎಫ್. ಹಣ ಪಾವತಿಸಿರುವುದಕ್ಕೆ ಸಂಬಂಧಿಸಿದಂತೆ ರಶೀದಿ ಕೊಡಬೇಕೆಂದು ಆಗ್ರಹಿಸಿದರು.

ಕಾರ್ಮಿಕರ ಕಾನೂನು ಪ್ರಕಾರ ಕಡ್ಡಾಯವಾಗಿ ವಾರಕ್ಕೆ ಒಂದು ರಜೆ ಕೊಡಬೇಕು. ಕೆಲಸದ ಸಮಯ ನಿಗಧಿಪಡಿಸಿ ಅಪಘಾತಕ್ಕೊಳಗಾದಾಗ ಚಿಕಿತ್ಸೆ ವೆಚ್ಚವನ್ನು ಇಲಾಖೆಯ ಪಾವತಿಸಿ ಪರಿಹಾರ ನೀಡಬೇಕು. ಪ್ರತಿ ತಿಂಗಳು ಐದನೆ ತಾರೀಖಿಗೆ ಸಂಬಳ ನೀಡಿ ಬಾಕಿಯಿರುವ ವೇತನವನ್ನು ಕೂಡಲೆ ಬಿಡುಗಡೆಗೊಳಿಸಬೇಕು. ಹಿಂದುಳಿದ ವರ್ಗ
ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಕಡಿತಗೊಳಿಸಿರುವ ಆದೇಶವನ್ನು ಸರ್ಕಾರ ರದ್ದುಪಡಿಸಿ 50 ವಿದ್ಯಾರ್ಥಿಗಳಿಗೆ ಮೂವರು ಸಿಬ್ಬಂದಿಯಂತೆ ನೇಮಿಸಿ ಹಿಂದಿನ ಪದ್ದತಿಯನ್ನು ಅನುಸರಿಸಬೇಕು. ಹೊರ ಗುತ್ತಿಗೆ ಅತಿಥಿ ಶಿಕ್ಷಕರುಗಳನ್ನು ಖಾಯಂಗೊಳಿಸಿ ಸೇವಾ ಭದ್ರತೆ ಕಲ್ಪಿಸಿ ಕನಿಷ್ಟ ವೇತನ ನೀಡುವುದು ಸೇರಿದಂತೆ ಒಟ್ಟು 21 ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರವನ್ನು ವಿನಂತಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನಿತ್‍ಕುಮಾರ್, ಮಧು, ಶಕ್ತಿಪ್ರಸಾದ್, ಮಂಜುನಾಥ್, ರೇಖಮ್ಮ, ಗಂಗಮ್ಮ, ತಿಮ್ಮೇಶ್, ಮಂಜುನಾಥ, ಗೋವಿಂದ್, ಉಮೇಶ್, ಸೋಮಶೇಖರ್ ಹಾಗೂ ನೂರಾರು ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now