ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 16 : ಸಾಹಿತ್ಯ, ರಂಗಕಲೆ, ನಾಟಕಕಾರ, ನಿರ್ದೇಶಕ, ಕವಿ, ರಂಗತಪಸ್ವಿ ನೀನಾಸಂ ಕೆ.ವಿ.ಸುಬ್ಬಣ್ಣ ಬಹುಮುಖ ಪ್ರತಿಭೆ, ಶಿಕ್ಷಣದ ಸದಭಿರುಚಿ, ಸದಾಚಾರ, ಮಾನವ ಸಂಪನ್ಮೂಲವನ್ನು ಸದುಪಯೋಗ ಮಾಡಿಕೊಂಡವರು. ಕೆ.ವಿ.ಸುಬ್ಬಣ್ಣ ದೇಶಕಂಡ ಅಪ್ರತಿಮ ರಂಗಕರ್ಮಿ ಎಂದು ಶಿಕ್ಷಣತಜ್ಞ ಮತ್ತು ನಾಟಕಕಾರ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ ಅಭಿಪ್ರಾಯಪಟ್ಟರು.
ನಗರದ ಶ್ರೀ ಸಿದ್ಧರಾಮೇಶ್ವರ ವಸತಿ ಪ್ರೌಢಶಾಲಾ ವಿದ್ಯಾರ್ಥಿ ನಿಲಯದ ಆವರಣದಲ್ಲಿ ರಂಗಸೌರಭ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಹೆಗ್ಗೋಡಿನ ನೀನಾಸಂ ಸಂಸ್ಥಾಪಕ ಸದಸ್ಯ, ಹಿರಿಯ ರಂಗಕರ್ಮಿ ಕುಂಟಗೋಡು ವಿಭೂತಿ ಸುಬ್ಬಣ್ಣ (ಕೆ.ವಿ.ಸುಬ್ಬಣ್ಣ) ಸ್ಮರಣೋತ್ಸವದ ಅಂಗವಾಗಿ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಣಾಮಕಾರಿ ರಂಗಭೂಮಿಯ ಮುಖೇನ ಸಂವಹನ ಮಾಧ್ಯಮವಾಗಿಸಿದ ಕೀರ್ತಿ ಸುಬ್ಬಣ್ಣನವರಿಗೆ ಸಲ್ಲುತ್ತದೆ. ಬೋಧನಾ ವಿಧಾನದಲ್ಲಿ ರಂಗಕೌಶಲ್ಯ, ಕಲೆ ಮತ್ತು ವಿಜ್ಞಾನ, ಸಂಕೀರ್ಣ ನಾಟಕಗಳ ಮೂಲಕ ಪ್ರೇಕ್ಷಕರಲ್ಲಿ ಹೊಸ ರಂಗಚಿಂತನೆ ಮತ್ತು ಮೌಲ್ಯಾಧಾರಿತ ಬದುಕನ್ನು ಹುಟ್ಟುಹಾಕುತ್ತಾರೆ. ಸುಬ್ಬಣ್ಣನವರ ರಂಗ ಮಾದರಿಗಳನ್ನು ಪರಿಚಯಿಸಿ ಮಕ್ಕಳಲ್ಲಿ ಸದಭಿರುಚಿಯ ಕನಸುಗಳನ್ನು ಬಿತ್ತಬೇಕು. ಸಮೂಹ ಮಾಧ್ಯಮ ರಂಗಭೂಮಿ ಕಲಿಕೆಯಲ್ಲಿ ಆಸಕ್ತಿ ಮೂಡಿಸುವ ರಂಗ ಆಯಾಮಗಳನ್ನು ಬೋಧನೆ ಮತ್ತು ಅನ್ವೇಷಣೆಯ ಮಾದರಿಯಲ್ಲಿ ಅಳವಡಿಸಿದರೆ ಉತ್ತಮ ಕಲಿಕಾ ಬೋಧನೆಯಾಗುತ್ತದೆ ಎಂದರು.
ಹಿರಿಯ ಪತ್ರಕರ್ತ ಎಂ.ಎನ್.ಯೋಗೀಶ್ ಇವರು ರಂಗಕರ್ಮಿ ಕೆ.ವಿ.ಸುಬ್ಬಣ್ಣ ಬದುಕು ಬರಹ ಕುರಿತು ಉಪನ್ಯಾಸ ನೀಡುತ್ತಾ ಮಾತನಾಡಿ ರಂಗಭೂಮಿ ಸಮಾಜದ ಕೈಗನ್ನಡಿ. ನೀನಾಸಂ ನಾಟಕಗಳು ಸಮಾಜವನ್ನು ಪ್ರತಿನಿಧಿಸುತ್ತದೆ. ವೃತ್ತಿಪರ ರಂಗಭೂಮಿ ಜೀವನಕ್ಕೆ ಭಿನ್ನವಿಭಿನ್ನವಾದ ದೃಷ್ಠಿಕೋನವನ್ನು ನೀಡುತ್ತದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಮೀಪವಿರುವ ಹೆಗ್ಗೋಡಿನಲ್ಲಿ ಕೆ.ವಿ.ಸುಬ್ಬಣ್ಣ ಸ್ನೇಹಿತರೊಡಗೂಡಿ ಕಟ್ಟಿದ ನೀನಾಸಂ ಸಂಸ್ಥೆಯು ರಂಗಭೂಮಿ ಮುಖೇನ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸಿದ ನೀನಾಸಂ ಇಂದು ಬೃಹತ್ತಾಗಿ ಬೆಳೆದು ನಿಂತಿದೆ. ಸಾಕ್ಷಿ ಮತ್ತು ನೀನಾಸಂ ಮಾತುಕತೆ ಪತ್ರಿಕೆ ಮತ್ತು ಅಕ್ಷರ ಪ್ರಕಾಶನದಿಂದ ಮೌಲ್ಯಾಧಾರಿತ ಪುಸ್ತಕಗಳನ್ನು ಪ್ರಕಟಿಸುತ್ತಾರೆ. ಗಾಂಧೀತತ್ವದ ಆಧಾರದ ಮೇಲೆ ಹೆಗ್ಗೋಡನ್ನು ಕಾರ್ಯಕ್ಷೇತ್ರ ಮಾಡಿಕೊಳ್ಳುತ್ತದೆ. ಜ್ಞಾನ, ಕನಸು, ಕನವರಿಕೆ, ಜಾತಿ ಸಮುದಾಯದೊಂದಿಗೆ ರಂಗಭೂಮಿ ಬದುಕಿನ ಅನುಸಂಧಾನ ಮಾಡಿಕೊಳ್ಳುತ್ತದೆ. 1949ರಲ್ಲಿ ಹುಟ್ಟಿದ ನೀನಾಸಂ, ರಂಗಶಿಕ್ಷಣ, ತಿರುಗಾಟ, ಸಂಸ್ಕøತಿ ಶಿಬಿರ ಮತ್ತು ರಸಗ್ರಹಣ ಚಲನಚಿತ್ರೋತ್ಸವ ಮುಂತಾದ ಕಾರ್ಯಸಾಧನೆಗಳಿಂದ ಗುರುತಿಸಿಕೊಂಡಿದೆ. ರಂಗಭೂಮಿಯಲ್ಲಿ ಬೃಹತ್ ವಿಶ್ವವಿದ್ಯಾಲಯದಂತೆ ನೀನಾಸಂ ಕಂಗೊಳಿಸುತ್ತಿದೆ. ನೀನಾಸಂ ರಂಗಶಿಕ್ಷಣದಿಂದ ತರಬೇತಿ ಪಡೆದ ಅನೇಕ ರಂಗಕರ್ಮಿಗಳು ನಕ್ಷತ್ರದಂತೆ ದೇಶಾದ್ಯಂತ ಮಿನುಗುತ್ತಿದ್ದಾರೆ ಎಂದರು.
ಮುಖ್ಯಶಿಕ್ಷಕ ಆನಂದ ತಳವಾರ ಅಧ್ಯಕ್ಷತೆ ವಹಿಸಿದ್ದರು. ಭೋವಿ ಗುರುಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೌನಹಳ್ಳಿ ಗೋವಿಂದಪ್ಪ, ಹಿರಿಯ ವರದಿಗಾರ ಈ.ಮಹೇಶ್‍ಬಾಬು ತಾರಾಮಂಡಲದ ಚಳ್ಳಕೆರೆ ಯರ್ರಿಸ್ವಾಮಿ, ನಿವೃತ್ತ ವಿಜ್ಞಾನ ಶಿಕ್ಷಕ ಹೆಚ್‍ಎಸ್‍ಟಿ ಸ್ವಾಮಿ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಹಿರಿಯ ರಂಗಭೂಮಿ ಕಲಾವಿದರಾದ ಮರಡಿ ರಾಜು, ಗಾಯಕ ಎಂ.ಕೆ.ಹರೀಶ್, ರಂಗಸೌರಭ ಕಲಾ ಸಂಘದ ಅಧ್ಯಕ್ಷ ಡಾ.ಕೆ ಮೋಹನ್‍ಕುಮಾರ್, ವಾದ್ಯ ಕಲಾವಿದ ಸಂಡೂರು ಹೇಮಂತ್, ಶಾರದಾ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಹೆಚ್.ಹನುಮಂತಪ್ಪ, ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ ಹಾಗೂ ಸೇಂಟ್ ಮೇರಿಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು, ಶ್ರೀ ಸಿದ್ಧರಾಮೇಶ್ವರ ವಸತಿ ಪ್ರೌಢಶಾಲೆ ಹಾಗೂ ಶಾರದಾ ಬಾಲಿಕಾ ಪ್ರೌಢಶಾಲೆ ಸಹಶಿಕ್ಷಕರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಡಿವಿಜಿ ರಾಷ್ಟ್ರೀಯ ಪ್ರಶಸ್ತಿ ಪುರಸ್ಕøತ ಹಿರಿಯ ಪತ್ರಕರ್ತ ಶ.ಮಂಜುನಾಥ ಹಾಗೂ ಕಥಾಸ್ಪರ್ಧೆ ರಾಜ್ಯ ಪ್ರಶಸ್ತಿ ವಿಜೇತ ಪತ್ರಕರ್ತ ಕೆ.ಪಿ.ಓಂಕಾರಮೂರ್ತಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ನೀನಾಸಂ ಪದವೀಧರ ಹಾಗೂ ರಂಗನಿರ್ದೇಶಕ ಕೆಪಿಎಂ. ಗಣೇಶಯ್ಯ ಕನ್ನಡ ಗೀತಗಾಯನ ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸರ್ಕಾರ ನಿಗಧಿಪಡಿಸಿದ ಧ್ವನಿಸಂಗೀತ ಸಂಯೋಜನೆಯ ನಾಡಗೀತೆ, ರೈತಗೀತೆ, ರಾಷ್ಟ್ರಗೀತೆ, ವಂದೇಮಾತರಂ ಹಾಗೂ ಧ್ವಜಗೀತೆಗಳನ್ನು ಶ್ರೀ ಸಿದ್ಧರಾಮೇಶ್ವರ ವಸತಿ ಪ್ರೌಢಶಾಲೆ ಹಾಗೂ ಶಾರದಾ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ವಿದ್ಯಾರ್ಥಿಗಳಾದ ಸುಮಂತ್‍ರೆಡ್ಡಿ ಪ್ರಾರ್ಥಿಸಿದರು. ಬಿ.ಧನಂಜಯ ಸ್ವಾಗತಿಸಿದರು. ಅಭಿನಾಯಕ ನಿರೂಪಿಸಿದರು. ಎಸ್. ಸೂರ್ಯ ವಂದಿಸಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








