ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಏ. 10 : ಆರ್‍ಎಸ್‍ಎಸ್ ಹಾಗೂ ಬಿಜೆಪಿ ಎರಡು ವಿಷಸರ್ಪಗಳಿದ್ದಂತೆ. ಎಐಸಿಸಿ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆಯನ್ನು ಭಾರತೀಯ ಜನತಾ ಪಾರ್ಟಿಯ ಚಿತ್ರದುರ್ಗ ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ ತೀವ್ರವಾಗಿ ಖಂಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಸ್ಸಾಂ ಚುನಾವಣೆ ರ್ಯಾಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ವಿಷ ಹಾವುಗಳಿಗೆ ಹೋಲಿಸಿದ್ದಾರೆ. ದೇಶದ ಹಿರಿಯ ರಾಜಕಾರಣಿಗಳಾಗಿ ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡುವುದು ಎಷ್ಟು ಸರಿ. ಮುಸ್ಲಿಮರಿಗೆ ಈ ರೀತಿಯ ಕರೆ ನೀಡುವ ಮೂಲಕ ಮಲ್ಲಿಕಾರ್ಜುನ ಖರ್ಗೆ ತಾವೊಬ್ಬ ಹಿರಿಯ ರಾಜಕಾರಣಿ ಎಂಬುದನ್ನು ಮರೆತಿದ್ದಾರೆ. ದೇಶದ ಜನರು ಕಾಂಗ್ರೆಸ್ ಪಕ್ಷವನ್ನು ಈಗಾಗಲೇ ಮೂಲೆಗುಂಪು ಮಾಡಿದ್ದಾರೆ. ಕಾಂಗ್ರೆಸ್‍ನವರು ಅಧಿಕಾರ ಇಲ್ಲದೆ ವಿಲವಿಲ ಒದ್ದಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
ಖರ್ಗೆ ಅವರೇ ನಿಮಗೆ ವಯಸ್ಸು ಆಗಿದೆ. ಮುಸ್ಲಿಮರ ಓಲೈಕೆ ಮಾಡುತ್ತಾ ನೀವು ಏನು ಬೇಕಾದರೂ ಹೇಳಬಹುದು ಎಂದು ತಿಳಿದುಕೊಂಡಿದ್ದೀರಾ? ಎಂದು ಪ್ರಶ್ನಿಸಿ, ನಿಮ್ಮ ಪಕ್ಷವನ್ನು ದೇಶದ ಜನತೆ ಈಗಲೇ ಕಿತ್ತು ಮೂಲೆಗುಂಪು ಮಾಡಿದ್ದಾರೆ. ನಿಮಗೆ ಯಾವ ರಾಜ್ಯಗಳಲ್ಲೂ ನೆಲೆ ಇಲ್ಲದಂತೆ ಆಗಿದೆ. ನಿಮ್ಮ ಪಕ್ಷದ ತತ್ವ, ಸಿದ್ಧಾಂತ, ಭಾವನೆಗಳನ್ನು ಅರಿತುಕೊಂಡಿರುವ ಜನತೆ ಈಗಾಗಲೇ ನಿಮಗೆ ಕಿಕ್ ಔಟ್ ಮಾಡಿದೆ. ಆದರೂ ನೀವು ಪಾಠ ಕಲಿಯದೇ ಹಾಗೆ ಉಳಿದಿದ್ದೀರಿ. ಕಾಂಗ್ರೆಸ್‍ನವರನ್ನು ಮನೆಗೆ ಕಳುಹಿಸಿ, ನಿವೃತ್ತಿ ಪಡೆಯಲು ಜನ ಹೇಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.












