ಸುದ್ದಿಒನ್, ಚಿತ್ರದುರ್ಗ. ಮೇ.10 : ರಾಜ್ಯದ ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಡಿ. ಸುಧಾಕರ್ (65 ವರ್ಷ) ಅವರು ಇಂದು ಬೆಳಿಗ್ಗೆ 3:15 ಕ್ಕೆ ನಿಧನರಾಗಿದ್ದಾರೆ. ಮೃತರು ಪತ್ನಿ ಹರ್ಷಿಣಿ ಸುಧಾಕರ್, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ರು. ಆದ್ರೆ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.

ಹಿರಿಯೂರು ಕ್ಷೇತ್ರದ ಶಾಸಕರಾಗಿದ್ದು, ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಆಗಿದ್ದರು. ಮೊಣಕಾಲು ಶಸ್ತ್ರಚಿಕಿತ್ಸೆಗೆಂದು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಶಸ್ತ್ರಚಿಕಿತ್ಸೆ ನಂತರ ಶ್ವಾಸಕೋಶದಲ್ಲಿ ಸೋಂಕು ಕಾಣಿಸಿಕೊಂಡು ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು. ಬಳಿಕ ಅವರನ್ನು ಮಣಿಪಾಲ್ ಆಸ್ಪತ್ರೆಯಿಂದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಅವರ ಸುದೀರ್ಘ ಚಿಕಿತ್ಸೆಯ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಅಂತ್ಯಕ್ರಿಯೆ : ಸಚಿವ ಸುಧಾಕರ್ ಅವರ ಪಾರ್ಥಿವ ಶರೀರವನ್ನು ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಿರಿಯೂರಿನ ನೆಹರೂ ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಚಳ್ಳಕೆರೆಯ ಸ್ವಗೃಹದಲ್ಲಿ ಪೂಜೆ ವಿಧಿ-ವಿಧಾನಗಳನ್ನು ನೆರವೇರಿಸಿ ಡಿ. ಸುಧಾಕರ್ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಾಳೆ (ಮೇ. 11 ರಂದು) ಮಧ್ಯಾಹ್ನ 3 ರಿಂದ 4 ಗಂಟೆಗೆ ಅಂತ್ಯಕ್ರಿಯೆ ವಿಧಿ-ವಿಧಾನಗಳು ನಡೆಯಲಿವೆ.
ಹಿನ್ನೆಲೆ :
ಮಾರ್ಚ್ 28, 1961ರಂದು ಚಳ್ಳಕೆರೆಯಲ್ಲಿ ಜನಿಸಿದರು. ಚಳ್ಳಕೆರೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ, ಚಿತ್ರದುರ್ಗದಲ್ಲಿ ಪಿಯುಸಿ, ಶಿವಮೊಗ್ಗದ ನ್ಯಾಷನಲ್ ಕಾಲೇಜಲ್ಲಿ ಬಿಕಾಂ ಪದವಿ ಪಡೆದಿದ್ದರು. ಕುಟುಂಬದಲ್ಲಿ ಅವರ ಚಿಕ್ಕಪ್ಪ ಎನ್. ಜಯಣ್ಣ ಅವರು ರಾಜಕಾರಣದಲ್ಲಿದ್ದ ಕಾರಣ ಅವರಿಗೂ ರಾಜಕೀಯದ ಕಡೆ ಸೆಳೆತವಿತ್ತು. 1978-89 ರ ಅವಧಿಯಲ್ಲಿ ಎನ್ ಜಯಣ್ಣ ಅವರು ಚಳ್ಳಕೆರೆಯ ಶಾಸಕರಾಗಿದ್ದರು. ನಂತರ ಚಿಕ್ಕಪ್ಪನ ಹಾದಿಯಲ್ಲೇ ಅವರು ಕೂಡಾ ಡಿ ಸುಧಾಕರ್ ರಾಜಕೀಯ ಪ್ರವೇಶ ಮಾಡಿದರು.

2004 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿ ಮೊದಲು ಆಯ್ಕೆಯಾಗಿದ್ದರು. ನಂತರ ಚಳ್ಳಕೆರೆ ಎಸ್ ಟಿ ಮೀಸಲು ಕ್ಷೇತ್ರವಾದ ಕಾರಣ 2008 ರಲ್ಲಿ ಹಿರಿಯೂರು ಕ್ಷೇತ್ರದ ಪಕ್ಷೇತರ ಶಾಸಕರಾಗಿ ಆಯ್ಕೆಯಾದರು. ಬಿಎಸ್ ವೈ ಸಂಪುಟದಲ್ಲಿ ಸಮಾಜ ಕಲ್ಯಾಣ, ಮುಜರಾಯಿ ಇಲಾಖೆಯ ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಬಂಧಿಖಾನೆ, ಯುವಜನಸೇವೆಯ ಸಚಿವರಾಗಿದ್ದರು. ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. 2013 ರಲ್ಲಿ ಪುನಃ ಕಾಂಗ್ರೆಸ್ ಪಕ್ಷಕ್ಕೆ ಮರಳಿ, ಹಿರಿಯೂರು ಕ್ಷೇತ್ರದಿಂದ ಜೆಡಿಎಸ್‌ನ ಎ. ಕೃಷ್ಣಪ್ಪ ವಿರುದ್ಧ ಗೆಲುವು ಸಾಧಿಸಿದ್ದರು. 2018 ರಲ್ಲಿ ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ಸೋಲು ಕಂಡಿದ್ದರು. 2023 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ, ಈಗ ಸಚಿವರಾಗಿ ಚಿತ್ರದುರ್ಗ ಉಸ್ತುವಾರಿಯಾಗಿದ್ದರು. ಚಿತ್ರದುರ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

















