ಸುದ್ದಿಒನ್, ಹಿರಿಯೂರು, .ಜುಲೈ.25 : ರಾಜ್ಯದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು, ಬರಪೀಡಿತ ಪ್ರದೇಶಗಳ ನಿರ್ವಹಣೆ ಹಾಗೂ ಹಳ್ಳಿಗಳ ಶಾಲಾ ಮಕ್ಕಳಿಗೆ ಬೆಂಗಳೂರು ಮಟ್ಟದ ಗುಣಮಟ್ಟದ ಶಿಕ್ಷಣ ತಲುಪಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಹಿರಿಯೂರು ಪಟ್ಟಣದ ವೇದಾವತಿ ವಿಜ್ಞಾನ ಕಾಲೇಜು ಹಿಂಭಾಗದ ಕ್ರೀಡಾಂಗಣದ ಹೆಲಿಪ್ಯಾಡ್ ನಲ್ಲಿ ಶನಿವಾರ ಅವರು ಬರಪೀಡಿತ ಪ್ರದೇಶಗಳಿಗೆ ಭೇಟಿ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದರು.
ಚಿತ್ರದುರ್ಗದಲ್ಲಿ ಬೆಂಗಳೂರು ವಿಭಾಗ ಮಟ್ಟದ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ಹಿರಿಯೂರಿನ ಹೆಲಿಪ್ಯಾಡ್ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿವಿಧ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.

ಬರ ಪರಿಸ್ಥಿತಿ ನಿರ್ವಹಣೆಗೆ ಸಂಬಂಧಿಸಿದಂತೆ ಆಡಳಿತವನ್ನು ವಿಕೇಂದ್ರೀಕರಣಗೊಳಿಸುವ ಉದ್ದೇಶದಿಂದ ತುಮಕೂರು, ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಪ್ರದೇಶಗಳಿಗೆ ಅನುಕೂಲವಾಗುವಂತೆ ಇಲ್ಲಿಯೇ ಪರಿಶೀಲನಾ ಸಭೆ ಆಯೋಜಿಸಲಾಗಿದೆ. ಬೆಳಗಾವಿ ಸಭೆಯ ನಿರ್ಧಾರದಂತೆ, ಆಲಮಟ್ಟಿ ಹೊರತುಪಡಿಸಿ ಉಳಿದೆಡೆ ನೀರಿನ ಪರಿಸ್ಥಿತಿ ಸದ್ಯಕ್ಕೆ ಸಮಾಧಾನಕರವಾಗಿದ್ದರೂ, ಬೇಸಿಗೆ ತೀವ್ರಗೊಳ್ಳುತ್ತಿರುವುದರಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸೂಕ್ತ ಚರ್ಚೆ ನಡೆಸಿ ಕುಡಿಯುವ ನೀರು ಮತ್ತು ರೈತರ ಬೆಳೆ ರಕ್ಷಣೆಗೆ ಆದ್ಯತೆ ನೀಡಲಾಗುವುದು ಎಂದು ಅವರು ಮಾಹಿತಿನೀಡಿದರು.
ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗ್ರಾಮೀಣ ಪ್ರದೇಶದಿಂದ ಶಿಕ್ಷಣಕ್ಕಾಗಿ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶ ಎಂದರು. ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿ ಹಾಗೂ ದೊಡ್ಡ ಸಿಬಿಎಸ್‌ಇ/ಐಸಿಎಸ್‌ಇ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ಹಳ್ಳಿಗಾಡಿನ ಶಾಲೆಗಳಿಗೆ ಗುಣಮಟ್ಟದ ಬೋಧನೆ ಮತ್ತು ಮೇಷ್ಟ್ರುಗಳ ಬೆಂಬಲ ತಲುಪಿಸುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಹೆಚ್ಚುವರಿ ತೊಂದರೆಯಾಗುವುದಿಲ್ಲ ಮತ್ತು ಗುಣಮಟ್ಟದ ಶಿಕ್ಷಣ ಸುಲಭವಾಗಿ ಸಿಗಲಿದೆ ಎಂದು ತಿಳಿಸಿದರು.
ಖಾಸಗಿ ಶಾಲೆಗಳ ಈ ದತ್ತು ಯೋಜನೆಯು ಗ್ರಾಮೀಣ ಪ್ರದೇಶಗಳಲ್ಲಿರುವ ಮೂಲಸೌಕರ್ಯದ ಕೊರತೆ ನೀಗಿಸಿ, ಬಡ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಇದೇ ವೇಳೆ, ದೇಶಾದ್ಯಂತ ಸೃಷ್ಟಿಯಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ಕೆಪಿಎಸ್ ಸಿ ವಿಚಾರದಲ್ಲಿ ಪ್ರತಿಪಕ್ಷಗಳ ಪ್ರತಿಭಟನೆಯನ್ನು ಪ್ರಜಾಪ್ರಭುತ್ವದ ಸ್ವಾಭಾವಿಕ ಪ್ರಕ್ರಿಯೆ ಎಂದು ಬಣ್ಣಿಸಿದರು. ಕೇಂದ್ರ ಸರ್ಕಾರದ ವಿಫಲತೆಯನ್ನು ಮುಚ್ಚಿಹಾಕಲು ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಲಕ್ಷಾಂತರ ಮಕ್ಕಳ ಭವಿಷ್ಯದ ಜೊತೆ ಆಟವಾಡುತ್ತಿರುವ ಮಂತ್ರಿಗಳು ತಕ್ಷಣ ರಾಜೀನಾಮೆ ನೀಡಬೇಕು ಎನ್ನುವ ನಿಲುವಿಗೆ ಕಾಂಗ್ರೆಸ್ ಬದ್ಧವಾಗಿದೆ. ಕೆಪಿಎಸ್ ಸಿ ವಿಚಾರದಲ್ಲೂ ತಪ್ಪಿತಸ್ಥರ ವಿರುದ್ಧ ಕಾನೂನುಬದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.
ಬಿಡದಿ ಭಾಗದ ರೈತರ ಮೇಲಿನ ಎಫ್ ಐಆರ್ ವಾಪಸ್ ಪಡೆಯುವ ಕುರಿತು ಮಾತನಾಡುತ್ತಾ, ರೈತರು ನಮ್ಮ ಕುಟುಂಬದವರು. ಯಾರ ಮೇಲೆಯೂ ಒತ್ತಡ ಹೇರುವ ಅಥವಾ ತೊಂದರೆ ಕೊಡುವ ಪ್ರಶ್ನೆಯೇ ಇಲ್ಲ. ನಾವೆಲ್ಲ ಒಟ್ಟಾಗಿ ಸಾಗಬೇಕಿದ್ದು, ಈ ಕುರಿತು ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು. ಸಂಪುಟ ವಿಸ್ತರಣೆಯ ಪ್ರಶ್ನೆಗೆ ಸದ್ಯದಲ್ಲೇ ಸೂಕ್ತ ಕ್ರಮಗಳು ಮುಂದುವರಿಯಲಿವೆ ಎಂದು ಸಂಕ್ಷಿಪ್ತವಾಗಿ ಪ್ರತಿಕ್ರಿಯಿಸಿದರು.










