ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 09 : ತಮಟಕಲ್ಲು ಓವರ್ ಬ್ರಿಡ್ಜ್ ಸಮೀಪ ನಿಂತಿದ್ದ ಲಾರಿಯ ಹಿಂಬದಿಗೆ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಐದು ಮಂದಿ ಮೃತಪಟ್ಟಿದ್ದು, ತೀವ್ರವಾಗಿ ಗಾಯಗೊಂಡಿರುವ ಒಬ್ಬನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಎನ್.ಎಸ್.ರುದ್ರಸ್ವಾಮಿ, ಚಂದ್ರಹಾಸ, ಶಾಂತಮೂರ್ತಿ, ಶ್ರೀನಿವಾಸ, ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದ್ದು, ಉತ್ತರ ಕರ್ನಾಟಕ ಪ್ರವಾಸ ಮುಗಿಸಿಕೊಂಡು ಇನ್ನೋವಾ ಕಾರಿನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದರು. ಗಾಯಳು ಚಿದಂಬರಾಚಾರ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗದ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅಪಘಾತದಲ್ಲಿ ಸಿಕ್ಕಿಕೊಂಡಿದ್ದ ಮೃತ ದೇಹಗಳನ್ನು ಸುತ್ತಮುತ್ತಲಿನ ಗ್ರಾಮಸ್ಥರ ಸಹಾಯದಿಂದ ಹೊರತೆಗೆದು ಶವಾಗಾರಕ್ಕೆ ಸಾಗಿಸಲಾಯಿತು. ಮೃತರನ್ನು ಬೆಂಗಳೂರು ಮೂಲದವರೆಂದು ಗುರುತಿಸಲಾಗಿದೆ.
ಗ್ರಾಮಾಂತರ ಠಾಣೆ ಪೊಲೀಸರು ಅಪಘಾತ ನಡೆದ ಸ್ಥಳಕ್ಕೆ ತೆರಳಿ ಮಹಜರ್ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.

