ಚಿತ್ರದುರ್ಗ | ಸಾಲಬಾಧೆ ತಾಳಲಾರದೆ ವಿಷ ಸೇವಿಸಿ ರೈತ ಆತ್ಮಹತ್ಯೆ
ಚಿತ್ರದುರ್ಗ : ಸಾಲಬಾಧೆ ತಾಳಲಾರದೆ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದ ಹನುಮಂತರಾಯ (45) ವರ್ಷದ ಮೃತ ದುರ್ದೈವಿ ರೈತನಾಗಿದ್ದಾನೆ.
ಮೃತ ರೈತನು ಹರಿಯಬ್ಬೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ 60 ಸಾವಿರ ಸಾಲ, ಗ್ರಾಮ ಶಕ್ತಿ ಫೈನಾನ್ಸ್ ಕಂಪನಿಯಲ್ಲಿ 4 ಲಕ್ಷ ಸೇರಿದಂತೆ ಅದೇ ಫೈನಾನ್ಸ್ ಕಂಪನಿಯಲ್ಲಿ ಹೆಂಡತಿಯ ಹೆಸರಿನಲ್ಲಿ 11 ಸಾವಿರ ಸಾಲ ಮಾಡಿದ್ದರು. ಈ ಲಕ್ಷಾಂತರ ಸಾಲ ತೀರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಬುಧವಾರ ಬೆಳಿಗ್ಗೆ ರೈತ ಜಮೀನಿಗೆ ತೆರಳಿದ್ದು, ಸುಗಂಧರಾಜ ಹೂವಿಗೆ ಸಿಂಪಡಿಸುವ ಕ್ರಿಮಿನಾಶಕ ಔಷಧ ಸೇವಿಸಿ ಸಾವನ್ನಪ್ಪಿದ್ದಾನೆ. ಮಗ ತಂದೆಗೆ ಊಟ ತೆಗೆದುಕೊಂಡು ಹೊಲಕ್ಕೆ ಹೋದಾಗ ತಂದೆ ಮಲಗಿರುವುದನ್ನು ನೋಡಿ, ಆತಂಕಕ್ಕೆ ಒಳಗಾಗಿ, ಗಾಬರಿಯಿಂದ ಓಡಿ ಬಂದು ಮನೆಯಲ್ಲಿ ವಿಷಯ ತಿಳಿಸಿದಾಗ, ಕುಟುಂಬಸ್ಥರು ಹೊಲಕ್ಕೆ ಹೋಗಿ ನೋಡುವಷ್ಟರಲ್ಲಿ ಆತನ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಘಟನೆ ತಿಳಿಯುತ್ತಿದ್ದಂತೆಯೇ ಸಂಬಂಧಿಕರು ಹಾಗೂ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತನನ್ನು ಕಂಡು ಕಂಬನಿ ಮಿಡಿದಿದ್ದಾರೆ. ಇನ್ನೂ
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ರೈತನಿಗೆ ಒಂದು ಗಂಡು, ಒಂದು ಹೆಣ್ಣು ಮಗಳು ಸೇರಿದಂತೆ ಒಟ್ಟು ಇಬ್ಬರು ಮಕ್ಕಳಿದ್ದರು. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹಿರಿಯೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.