ಸುದ್ದಿಒನ್, ಚಿತ್ರದುರ್ಗ(ಜುಲೈ24) : ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಅನುಭವ ಮಂಟಪ ಸಭಾಂಗಣದಲ್ಲಿ ಶನಿವಾರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ನಡೆಯಲಿದೆ. ಬರ ನಿರ್ವಹಣೆ, ಕುಡಿಯುವ ನೀರು, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಪಂಚ ಗ್ಯಾರಂಟಿಗಳ ಪೈಕಿ ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳ ಪರಿಶೀಲನೆ ಮಾಹಿತಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಸಿದ್ದವಾಗಿಟ್ಟುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚಿಸಿದರು.
ಪ್ರಗತಿ ಪರಿಶೀಲನಾ ಸಭೆಯ ಅಂತಿಮ ಸಿದ್ದತೆಗಳ ಕುರಿತು ಶುಕ್ರವಾರ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ, ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.
ಈಗಾಗಲೇ ಬೆಂಗಳೂರು ವಿಭಾಗ ಮಟ್ಟದ 9 ಜಿಲ್ಲೆಗಳ ವಿಪತ್ತು ನಿರ್ವಹಣೆ, ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಜಲಜೀವನ್ ಮಿಷನ್, ನಗರಾಭಿವೃದ್ಧಿ, ಸಣ್ಣ ನೀರಾವರಿ, ಶಾಲಾ ಶಿಕ್ಷಣ, ಅರಣ್ಯ ಹಾಗೂ ಪೊಲೀಸ್ ಇಲಾಖೆಗಳ ಮಾಹಿತಿಗಳನ್ನು ಈಗಾಗಲೇ ಸರ್ಕಾರದಿಂದ ಸಂಗ್ರಹಿಸಿಲಾಗಿದೆ. ಇದರ ಹೊರತಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಯಡಿ ನೀರಾವರಿ ವಿಸ್ತರಣೆ ಕುರಿತಂತೆ ಸ್ಥಳೀಯ ಜನಪ್ರತಿನಿಧಿಗಳು ಮುಖ್ಯಮಂತ್ರಿಗಳ ಗಮನ ಸೆಳೆಯಬಹುದು. ಈ ಹಿನ್ನಲೆಯಲ್ಲಿ ಹೊಳಲ್ಕೆರೆ, ಹಿರಿಯೂರು ತಾಲ್ಲೂಕುಗಳ ಪ್ರದೇಶಗಳನ್ನು ನೀರಾವರಿ ಯೋಜನೆಗೆ ಒಳಪಡಿಸುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗಳ ವಿವರಗಳನ್ನು ನೀಡಿದರೆ, ಸಭೆಯಲ್ಲಿ ಉತ್ತರಿಸಲು ಅನುವಾಗುತ್ತದೆ.
ಜಿಲ್ಲೆಯಲ್ಲಿ ಜಾನುವಾರುಗಳ ಸಂಖ್ಯೆ ಅನುಗುಣವಾಗಿ ಲಭ್ಯ ಇರುವ ಮೇವು ಸಂಗ್ರಹಣೆ ವಿವರಗಳನ್ನು ಅಧಿಕಾರಿಗಳು ನೀಡುವುದರ ಜೊತೆಗೆ, ಜಿಲ್ಲೆಯಲ್ಲಿ 88,740 ಹೆಕ್ಟೇರ್ ಗೋಮಾಳ ಹಾಗೂ 8552 ಹೆಕ್ಟೇರ್ ಅಮೃತ್ ಕಾವಲ್ ಪ್ರದೇಶಗಳು ಇರುವುದನ್ನು ತಮ್ಮ ಮಾಹಿತಿಯಲ್ಲಿ ನೀಡಬೇಕು. ಈಗಾಗಲೇ ಜಿಲ್ಲೆಯಲ್ಲಿ ವಿತರಿಸಿರುವ ಮೇವು ಕಿಟ್ ಹಾಗೂ ಸರ್ಕಾರಕ್ಕೆ ಸಲ್ಲಿಸಿರುವ ಮೇವು ಕಿಟ್ ವಿವರಗಳನ್ನು ಸಹ ನೀಡಿಸಬೇಕು.
ಕೃಷಿ ಇಲಾಖೆ ಸಂಬಂಧಿಸಿದಂತೆ ಮುಂಗಾರು ಕೊರತೆಯಿಂದ ಜಿಲ್ಲೆಯಲ್ಲಿ 13.73 ಲಕ್ಷ ಹೇಕ್ಟರ್ ಪೈಕಿ ಬಿತ್ತನೆ ಗುರಿ ಪೈಕಿ ಇದುವರೆಗೆ ಎಷ್ಟು ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ದಾಸ್ತಾನು ಹಾಗೂ ಹಂಚಿಕೆ ಕುರಿತು ಮಾಹಿತಿ ನೀಡಿ.
ಸದ್ಯ ಶುದ್ದ ಕುಡಿಯುವ ನೀರಿನ ಘಟಕ, ಕುಡಿಯುವ ನೀರು ಸರಬರಾಜು, ಜಲಜೀವನ್ ಮಿಷಿನ್ ಕಾಮಗಾರಿ ಪ್ರಗತಿ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಕಾರ್ಯಾತ್ಮಕ ನಳ ಸಂಪರ್ಕ, ಕುಡಿಯುವ ನೀರಿನ ಸಂಕಷ್ಟ ಎದುರಾಗಿರುವ ಹಳ್ಳಿ, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿರುವ ಹಳ್ಳಿಗಳ ಕುರಿತು ನೀಡುವ ವಿವರಗಳು ಸ್ಪಷ್ಟವಾಗಿರಬೇಕು. ಶಿಕ್ಷಣ ಇಲಾಖೆ ಸಂಬಂಧಿಸಿದಂತೆ ದಾಖಲಾತಿ ಪ್ರಮಾಣ, ವಿದ್ಯಾರ್ಥಿಗಳ ನಿರಂತರ ಹಾಜರಾತಿಯಲ್ಲಿ ಕುಂಠಿತವಾಗಿರುವುದಕ್ಕೆ ಸ್ಪಷ್ಟೀಕರಣ ನೀಡಬೇಕು ಎಂದು ಜಿಲ್ಲಾಧಿಕಾರಿ.ಟಿ.ವೆಂಕಟೇಶ್ ಹೇಳಿದರು.
ಇದರೊಂದಿಗೆ ಪ್ರಗತಿ ಪರಿಶೀಲನೆ ಸಭೆಯ ಆಯೋಜನೆಗೆ ರಚಿಸಿದ ಸಮಿತಿಗಳ ಅಧಿಕಾರಿಗಳು ಇಂದೇ ಅಗತ್ಯ ಸಿದ್ದತೆಗಳನ್ನು ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಸಭೆಯಲ್ಲಿ ಜಿ.ಪಂ.ಸಿಇಓ ಡಾ.ಆಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ಮತ್ತಿತರು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










