ಬೆಂಗಳೂರು, ನ. 5: ಮನುಷ್ಯನನ್ನು ಮನುಷ್ಯನಂತೆ ಕಾಣುವ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಭಾಷೆ ಕನ್ನಡ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಚಲನಚಿತ್ರ ನಿರ್ದೇಶಕ ಹಾಗೂ ರಂಗಕರ್ಮಿ ಟಿ.ಎಸ್. ನಾಗಾಭರಣ ಅಭಿಪ್ರಾಯಪಟ್ಟಿದ್ದಾರೆ.ಶಕ್ತಿ ವಾಹಿನಿ ಕನ್ನಡ ಬಳಗ ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪಿ. ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ. ಅದು ಮಾನವೀಯತೆ, ಸಂಸ್ಕಾರ ಮತ್ತು ಮಾನವತಾವಾದದ ಮೌಲ್ಯಗಳನ್ನು ಒಳಗೊಂಡಿದೆ. ವಿಶ್ವಮಾನವತ್ವ ಹಾಗೂ ಮನುಜ ಮತದ ಸಂದೇಶವನ್ನು ಸಾರಿದವರು ಕನ್ನಡಿಗರು. ಸಾಹಿತ್ಯ ಮತ್ತು ಸಂಸ್ಕೃತಿಯ ಮೂಲಕ ಎಲ್ಲರನ್ನೂ ಒಗ್ಗೂಡಿಸುವ ಮನೋಭಾವ ಕನ್ನಡಿಗರಲ್ಲಿದೆ ಎಂದು ಹೇಳಿದರು.
ಕನ್ನಡ ಭಾಷೆ ನಿರಂತರವಾಗಿ ಹರಿಯುವ ನದಿಯಿದ್ದಂತೆ. ಮನುಷ್ಯತ್ವದ ಮೌಲ್ಯಗಳನ್ನು ತಲೆಮಾರಿನಿಂದ ತಲೆಮಾರಿಗೆ ಪಸರಿಸುತ್ತಾ ಬಂದಿದೆ. ಮಾತನಾಡುವ ಎಲ್ಲ ವಿಚಾರಗಳನ್ನೂ ಪದಗಳ ಮೂಲಕ ಸಮರ್ಥವಾಗಿ ಅಭಿವ್ಯಕ್ತಪಡಿಸುವ ಶಕ್ತಿ ಕನ್ನಡ ಭಾಷೆಗಿದೆ ಎಂದು ನಾಗಾಭರಣ ತಿಳಿಸಿದರು.
ಕಚೇರಿಗಳಲ್ಲಿ ಕನ್ನಡ ಬಳಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಹೊಸ ಕನ್ನಡ ಪದಗಳನ್ನು ಸೃಷ್ಟಿಸಿ ಬಳಕೆಗೆ ತರುವ ಮೂಲಕ ಭಾಷೆಯನ್ನು ಭವಿಷ್ಯದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಬೇಕು. ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಿಗೆ ದೊರೆಯುವಂತೆಯೇ ಕನ್ನಡಕ್ಕೂ ಸಮಾನ ಅವಕಾಶಗಳನ್ನು ಕಲ್ಪಿಸಬೇಕು. ಕನ್ನಡದ ಬೆಳವಣಿಗೆಯೊಂದಿಗೆ ನಮ್ಮ ಬೆಳವಣಿಗೆಯೂ ಸಾಗಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ಪಿ. ಮಾತನಾಡಿ, ನಿಗಮದ ನಿಯಮಿತ ಕಚೇರಿ ಕಡತಗಳು ಕನ್ನಡದಲ್ಲಿರುವಂತೆ ಕ್ರಮ ವಹಿಸಲಾಗುವುದು. ಕನ್ನಡಪರ ಚಟುವಟಿಕೆಗಳಿಗೆ ನಿಗಮದಿಂದ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಹೊರರಾಜ್ಯ ಅಥವಾ ವಿದೇಶಗಳಿಂದ ಕರ್ನಾಟಕಕ್ಕೆ ಬರುವವರನ್ನು ತಮ್ಮವರಂತೆ ಸ್ವೀಕರಿಸಿ ಪ್ರೀತಿ ತೋರುವ ಗುಣ ಕನ್ನಡಿಗರಲ್ಲಿದೆ. ಕನ್ನಡಿಗರ ಈ ಆತ್ಮೀಯತೆಯೇ ಅನೇಕರು ಕರ್ನಾಟಕವನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಆಯ್ಕೆ ಮಾಡಿಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಅಲ್ಲಿನ ಜನರು ತೋರಿದ ಪ್ರೀತಿ ಮತ್ತು ಆತ್ಮೀಯತೆಯನ್ನು ತಾವು ಅನುಭವಿಸಿದ್ದೇನೆ. ಕನ್ನಡಿಗರ ಈ ಪ್ರೀತಿಗೆ ಸದಾ ಋಣಿಯಾಗಿರುವುದಾಗಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಟಿ.ಎಸ್. ನಾಗಾಭರಣ ಅವರನ್ನು ಶಕ್ತಿ ವಾಹಿನಿ ಕನ್ನಡ ಬಳಗ ಹಾಗೂ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿಗಮದ ತಾಂತ್ರಿಕ ನಿರ್ದೇಶಕ ಎಂ.ಆರ್. ಗಂಗಾಧರ್, ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ರೇಖಾ ಟಿ., ಹಣಕಾಸು ನಿರ್ದೇಶಕ ರಾಜು ಕೆ.ಎಸ್., ವ್ಯವಸ್ಥಾಪಕ ನಿರ್ದೇಶಕರ ಸಲಹೆಗಾರ ಆರ್. ನಾಗರಾಜ, ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ಪ್ರಬಂಧಕಿ ಡಾ. ಆಶಾ ಎಸ್., ಕೆಪಿಸಿಎಲ್ ನೌಕರರ ಸಂಘದ ಅಧ್ಯಕ್ಷ ವೀರೇಂದ್ರ ಕೆ., ಶಕ್ತಿ ವಾಹಿನಿ ಕನ್ನಡ ಬಳಗದ ಅಧ್ಯಕ್ಷ ಸತೀಶ್ ರಾಜಾಜಿ ಗೌಡ, ಪ್ರಧಾನ ಕಾರ್ಯದರ್ಶಿ ಬಾಬು ಮ್ಯಾಥ್ಯೂಸ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.










