Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | ಅಕ್ಕ-ತಂಗಿಯರ ಭೇಟಿ ; ಸಂಭ್ರಮಿಸಿದ ಜನತೆ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಚಿತ್ರದುರ್ಗ ಏ. 07 : ನಗರ ದೇವತೆಗಳಾದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ಮತ್ತು ಬರಗೇರಮ್ಮ ದೇವಿ ಭೇಟಿ ಉತ್ಸವ ಮಂಗಳವಾರ ರಾತ್ರಿ ದೊಡ್ಡಪೇಟೆ ರಸ್ತೆಯಲ್ಲಿ ಸಂಭ್ರಮದಿಂದ ನಡೆಯಿತು.


ಗ್ರಾಮ ದೇವತೆಗಳ ದಿವ್ಯ ಸಮಾಗಮ

ಗ್ರಾಮದೇವತೆಗಳಾದ ಶ್ರೀ ಬರಗೇರಮ್ಮ ಮತ್ತು ಶ್ರೀ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿಯರು ಅತ್ಯಂತ ಸುಂದರವಾಗಿ ಅಲಂಕಾರಗೊಂಡು ತಮ್ಮ ಮೂಲ ದೇವಸ್ಥಾನಗಳಿಂದ ಹೊರಡಲಿದ್ದಾರೆ. ನಗರದ ಪಶ್ಚಿಮ ಭಾಗದಲ್ಲಿ ನೆಲೆಸಿರುವ ಬರಗೇರಮ್ಮ ಹಾಗೂ ಪೂರ್ವ ಭಾಗದಲ್ಲಿ ನೆಲೆಸಿರುವ ತಿಪ್ಪಿನಘಟ್ಟಮ್ಮ ದೇವಿಯ ಭೇಟಿ ಉತ್ಸವಕ್ಕೆ ಅಪಾರ ಭಕ್ತರು ಸಾಕ್ಷಿಯಾದರು. ಸುಮಾರು ರಾತ್ರಿ ೯.೩೦ ರಿಂದ ೯.೪೫ಕ್ಕೆ ಅಕ್ಕ-ತಂಗಿಯರು ಭೇಟಿಯಾದರು.

 

ಜಾನಪದ ಸೊಗಡಿನ ವೈಭವದ ಮೆರವಣಿಗೆ

ಅಕ್ಕ-ತಂಗಿಯರ ಭೇಟಿ ಉತ್ಸವ ಎಂದೇ ಜನಜನಿತವಾಗಿರುವ ಈ ಉತ್ಸವ ಜಾನಪದ ಸೊಗಡಿನ ಹಿನ್ನೆಲೆ ಹೊಂದಿದೆ. ಸೋಮನ ಕುಣಿತ, ಡೊಳ್ಳು ಕುಣಿತ, ದೀವಟಿಗೆ ಧಾರಿಗಳು, ಉರುಮೆನಾದ, ತಮಟೆಗಳ ಸದ್ದು, ಡೊಳ್ಳುವಾದನಗಳು ಭೇಟಿಯ ಉತ್ಸವಕ್ಕೆ ಮೆರುಗು ನೀಡಿದ್ದವು. ಅತ್ಯಂತ ಸುಂದರವಾಗಿ ಪುಷ್ಪಾಲಂಕೃತ ಗೊಂಡಿದ್ದ ಅಕ್ಕ-ತಂಗಿಯರು ಪರಸ್ಪರ ಭೇಟಿಗಾಗಿ ತವಕಿಸುತ್ತಿರುವ ದೃಶ್ಯ ಸೊಗಸಾಗಿತ್ತು. ಈ ದೃಶ್ಯ ಭಕ್ತಾದಿಗಳನ್ನು ಪುಳಕಿತಗೊಳಿಸಿತು. ಅಕ್ಕ-ತಂಗಿಯವರು ಪರಸ್ಪರ ಬೇಟಿಯಾಗುತ್ತಿದ್ದಯೇ ಸುತ್ತ-ಮುತ್ತಲು ನೆರದಿದ್ದ ಭಕ್ತಾಧಿಗಳು ಸೀಳ್ಳು, ಕೇಕೆ, ಚಪ್ಪಾಳೆಯನ್ನು ಹೊಡೆಯುವುದರ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶನ ಮಾಡಿದರು.

 

ಕೋಟೆನಾಡಿನ ರಾಜಬೀದಿಯಲ್ಲಿ ಸಂಪ್ರದಾಯದ ಸಂಗಮ

ಸಿಂಗಾರಗೊಂಡ ಉತ್ಸವ ಮೂರ್ತಿಗಳ ಭವ್ಯ ಮೆರವಣಿಗೆ, ಜನ ಜಾತ್ರೆಯ ನಡುವೆ ರಾಜಬೀದಿಯಲ್ಲಿ ಅಕ್ಕ-ತಂಗಿಯರ ದಿವ್ಯ ಸಮಾಗಮ. ಸಾಂಪ್ರದಾಯಿಕ ಅಪೂರ್ವ ಸಂಗಮ ಕಣ್ತುಂಬಿಕೊಂಡ ಭಕ್ತರಲ್ಲಿ ಪುನೀತ ಭಾವ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ನಗರದ ರಾಜಬೀದಿಯಲ್ಲಿ. ಹೌದು, ರಂಗಯ್ಯನ ಬಾಗಿಲು ಕಡೆಯಿಂದ ತ್ರಿಪುರ ಸುಂದರಿ ತಿಪ್ಪಿನಘಟ್ಟಮ್ಮ ದೇವಿ ವಯ್ಯಾರದಿ ಆಗಮಿಸಿದರೆ, ಇತ್ತ ಉಚ್ಚಂಗಿ ಎಲ್ಲಮ್ಮ ದೇಗುಲದ ಕಡೆಯಿಂದ ಬಂಗಾರಿ ಬರಗೇರಮ್ಮ ದೇವಿ ಬಿಂಕದಿ ಆಗಮಿಸಿದಳು!

 

ಜಿಲ್ಲಾಡಳಿತ ಮತ್ತು ಇಲಾಖೆಗಳ ವಿಶೇಷ ಸಿದ್ಧತ

ಇನ್ನು ಈ ವಿಶೇಷ ಉತ್ಸವಕ್ಕೆ ಜಿಲ್ಲಾಡಳಿತ, ನಗರಸಭೆ, ಪೊಲೀಸ್ ಇಲಾಖೆ ಹಾಗೂ ದೇಗುಲ ಸಮಿತಿಗಳು ಈ ವರ್ಷ ವಿಶೇಷ ಸಿದ್ಧತೆಯನ್ನು ಮಾಡಿಕೊಂಡಿದ್ದವು. ರಾಜಬೀದಿ ಉದ್ದಕ್ಕೂ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿತ್ತು. ಸಾವಿರಾರು ಜನ ಭಕ್ತರು ಉತ್ಸವದಲ್ಲಿ ಭಾಗಿಯಾಗಿದ್ದರು. ಅಕ್ಕ-ತಂಗಿ ಭೇಟಿ ಉತ್ಸವಕ್ಕೆ ಸಾಕ್ಷಿಯಾಗಿ ಸಂಭ್ರಮಿಸಿದರು. ಅಕ್ಕ-ತಂಗಿ ಭೇಟಿ ಉತ್ಸವ ದುರ್ಗದ ಪರಂಪರೆಯ ಉತ್ಸವವಾಗಿದೆ. ದುರ್ಗದ ಹೆಣ್ಣುಮಕ್ಕಳು ಈ ಸಂದರ್ಭದಲ್ಲಿ ತವರಿಗೆ ಬಂದು ಅಕ್ಕ-ತಂಗಿ ಭೇಟಿ ಉತ್ಸವದಲ್ಲಿ ಪಾಲ್ಗೊಂಡು ಸಂಭ್ರಮಿಸುವುದು ವಿಶೇಷ.

 

ಮನುಕುಲಕ್ಕೆ ಮಾನವೀಯ ಸಂಬಂಧಗಳ ಸಂದೇಶ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ನಗರದಲ್ಲಿ ಅಕ್ಕ-ತಂಗಿಯರ ಅಪರೂಪದ ಸಂಗಮ ವೈಭವದಿಂದಲೇ ನಡೆಯಿತು. ಸಾವಿರಾರು ಜನ ಭಕ್ತರು ಅಪೂರ್ವ ಸಂಗಮ ಕಣ್ಣು ತುಂಬಿಕೊಂಡು ಪುನೀತ ಭಾವ ಅನುಭವಿಸಿದರು. ಸಾಂಪ್ರದಾಯಿಕ ಉತ್ಸವ ಮಾನವೀಯ ಸಂಬಂಧಗಳ ಬಗ್ಗೆ ವಿಶೇಷ ಸಂದೇಶ ರವಾನಿಸುವ ಮೂಲಕ ಜನರ ಮನ ಶುದ್ಧಗೊಳಿಸುವ ಮೂಲಕ ಸಾರ್ಥಕತೆ ಪಡೆಯಿತು. ಈ ಅಪರೂಪದ, ವೈಭವದ ಭೇಟಿ ಉತ್ಸವವನ್ನು ನೋಡಲು ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಂದ ಭಕ್ತರು ಆಗಮಿಸಿದ್ದರು.

 

ಜಾತ್ರಾ ಸಂಭ್ರಮ ಮತ್ತು ಪೊಲೀಸ್ ಬಂದೋಬಸ್ತ್

ಜಾತ್ರೆಯ ಅಂಗವಾಗಿ ವಿವಿಧ ರೀತಿಯ ಅಂಗಡಿಗಳು ಬಂದಿದ್ದು, ಇದರಲ್ಲಿ ವಿವಿಧ ರೀತಿಯ ಧ್ವನಿ ಮಾಡುವ ಸಾಧನೆಗಳನ್ನು ಖರೀದಿಸಿದ ಯುವ ಜನತೆ ಅದರಿಂದ ಧ್ವನಿ ಮಾಡುವುದರ ಮೂಲಕ ಉಚ್ಚಂಗಿ ಯಲ್ಲಮ್ಮ ದೇವಾಲಯದಿಂದ ಅಕ್ಕ-ತಂಗಿಯರು ಭೇಟಿ ಮಾಡುವ ಸ್ಥಳದವರೆಗೂ ಹೋಗಿ ಬರುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಅಕ್ಕ-ತಂಗಿಯ ಭೇಟಿ ಸುಗಮವಾಗಿ ನಡೆಯಲು ಪೋಲಿಸ್ ಇಲಾಖೆ ಸಂಜೆಯಿಂದಲೇ ಶ್ರಮವನ್ನು ಹಾಕಿತ್ತು. ಪುರುಷ ಮತ್ತು ಮಹಿಳಾ ಪೋಲಿಸರು ಜನತೆಯನ್ನು ನಿಭಾಯಿಸುವಲ್ಲಿ ಹರ ಸಾಹಸ ಮಾಡಿದರು.

 

ಐತಿಹಾಸಿಕ ಭೇಟಿಗೆ ಸಜ್ಜಾದ ದೊಡ್ಡಪೇಟೆ

ಚಿತ್ರದುರ್ಗ ನಗರದ ರಾಜಬೀದಿ ದೊಡ್ಡಪೇಟೆಯಲ್ಲಿ ಏ.೦೭ ಕ್ಕ್ಕೆ ನಡೆದ ಅಕ್ಕ ತಂಗಿಯರ ಐತಿಹಾಸಿಕ ಭೇಟಿ ಉತ್ಸವಕ್ಕೆ ಸಕಲ ಸಿದ್ಧತೆಯನ್ನು ಕಳೆದ ಮೂರು ದಿನಗಳಿಂದ ನಡೆಸಲಾಯಿತು. ಜನಪದ ಸೊಗಡಿನ ಹಿನ್ನೆಲೆ ಹೊಂದಿರುವ ಈ ಭೇಟಿ ಉತ್ಸವ ಪ್ರತಿವರ್ಷ ಶ್ರೀ ಏಕನಾಥೇಶ್ವರಿ ಅಮ್ಮನವರ ಸಿಡಿ ಉತ್ಸವದ ನಂತರ ಮೊದಲ ಮಂಗಳವಾರ ನಡೆಯುವುದು ವಾಡಿಕೆ. ಅದರಂತೆ ಇಂದು ನಡೆದ ಭೇಟಿ ಉತ್ಸವಕ್ಕೆ ರಾಜಬೀದಿ ದೊಡ್ಡಪೇಟೆಯಲ್ಲಿ ತಳಿರು ತೋರಣಗಳಿಂದ ಸಿಂಗರಿಸಿದ್ದು, ರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ ದೇವಸ್ಥಾನದಿಂದ ರಂಗಯ್ಯನ ಬಾಗಿಲಿನವರೆಗೂ ರಸ್ತೆಯ ಎರಡೂ ಬದಿಗಳಲ್ಲಿ ಸಾರ್ವಜನಿಕರು ಭೇಟಿ ಉತ್ಸವ ವೀಕ್ಷಿಸಲು ಬ್ಯಾರಿಕೇಡ್ ನಿರ್ಮಿಸಲಾಗಿತ್ತು.

ಪುಷ್ಪಾಲಂಕಾರ ಮತ್ತು ಪೌರಕಾರ್ಮಿಕರ ಸೇವೆ

ಭೇಟಿ ಉತ್ಸವ ಸಮಿತಿಯು ಉತ್ಸವಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸಿದ್ದು, ಜತೆಗೆ ಪ್ರತಿ ವರ್ಷದಂತೆ ನಗರಸಭೆಯಿಂದ ಸ್ವಚ್ಛತಾ ಕಾರ್ಯ, ನೀರಿನ ಸೌಕರ್ಯ, ಹೆಚ್ಚಿನ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಮಹೋತ್ಸವ ನಡೆಯುವ ಸ್ಥಳದಲ್ಲಿ ಏ.೦೭ರ ಬೆಳಗ್ಗೆಯಿಂದ ಆಕರ್ಷಕ ಅಲಂಕಾರ ನಡೆದಿದ್ದು, ಭೇಟಿಯಾಗುವ ನಿಗದಿತ ಸ್ಥಳದಲ್ಲಿ ಓಂ ಚಿಹ್ನೆಯ ಆಕಾರದಲ್ಲಿ ನಾನಾ ಪುಷ್ಪಗಳಿಂದ ಹಾಗೂ ಮೇಲ್ಭಾಗದಲ್ಲಿ ಮಿನುಗುವ ವರ್ಣಮಯ ವಸ್ತುಗಳಿಂದ ಸಿಂಗರಿಸಲಾಗಿತು.

ಅಕ್ಕ-ತಂಗಿಯರ ಬೇಟಿಗಾಗಿ ನಗರಸಭೆಯ ಪೌರ ಕಾರ್ಮಿಕರು ಹಗಲು ಇರಳು ಶ್ರಮವನ್ನು ಹಾಕಿದ್ದಾರೆ. ಕಳೆದ ಒಂದು ವಾರದಿಂದಲೇ ಅಕ್ಕ-ತಂಗಿಯರ ಭೇಟಿಯಾಗುವ ಸ್ಥಳವನ್ನು ಸ್ವಚ್ಚ ಮಾಡುವ ಕಾರ್ಯ ಮಾಡಿದ್ದು, ಆ ಸ್ಥಳವನ್ನು ಪೂರ್ಣ ಪ್ರಮಾಣದಲ್ಲಿ ಸ್ವಚ್ಚ ಮಾಡಿ ಜನತೆ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಇದರೊಂದಿಗೆ ಭೇಟಿಯ ಸ್ಥಳದಲ್ಲಿ ಸುತ್ತಲೂ ಬ್ಯಾರಿಕೇಟಿಂಗ್ ಮಾಡಿದ್ದು, ಭೇಟಿ ಸಂದರ್ಭದಲ್ಲಿ ಜನತೆ ಆಗಮಿಸದಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...