ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್.11 : ಹತ್ತು ತಿಂಗಳ ಹಿಂದೆ ಅಪ್ರಾಪ್ತ ಬಾಲಕಿಯ (8 ತಿಂಗಳ ಹಸುಗೂಸು) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೋ ಪ್ರಕರಣದ ಆರೋಪಿಗೆ ಚಿತ್ರದುರ್ಗ ಜಿಲ್ಲೆ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು (ಪೋಕ್ಸೋ) 20 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.
ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಹೊಸಹಟ್ಟಿಯ ಈಶಣ್ಣ (37 ವರ್ಷ) ಆರೋಪಿಯಾಗಿದ್ದು, ಈ ಬಗ್ಗೆ ತುರುವನೂರು ಪೊಲೀಸ್ ಠಾಣೆಯಲ್ಲಿ ದಿನಾಂಕ 19.12.2022 ರಂದು ಪ್ರಕರಣ ದಾಖಲಾಗಿತ್ತು. ಪೋಲೀಸ್ ಇನ್ಸ್ ಪೆಕ್ಟರ್ ಸಿ.ವೆಂಕಟೇಶ್ ಇವರು ತನಿಖೆಯನ್ನು ಪೂರೈಸಿ ಪೋಕ್ಸೋ ಕಾಯಿದೆ ಅಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನಂತರ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಮತಿ ಬಿ.ಕೆ. ಕೋಮಲ ಅವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ 20 ವರ್ಷ ಕಠಿಣ ಸಜೆ ಮತ್ತು ರೂ. 25,000/- ದಂಡ ವಿಧಿಸಿ ಇಂದು (ದಿನಾಂಕ 11.10.2023 ರಂದು) ತೀರ್ಪು ನೀಡಿರುತ್ತಾರೆ ಮತ್ತು ನೊಂದ ಬಾಲಕಿಗೆ ಪರಿಹಾರವಾಗಿ
ಒಟ್ಟು ರೂ. 4,25,000/- ನೀಡುವಂತೆ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿದೆ.
ಪ್ರಾಸಿಕ್ಯೂಷನ್ ಪರವಾಗಿ ಚಿತ್ರದುರ್ಗ ಪೋಕ್ಸೋ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ಹೆಚ್.ಆರ್. ಜಗದೀಶ್ ವಾದಿಸಿದ್ದರು.