ಸುದ್ದಿಒನ್ ,ಚಿತ್ರದುರ್ಗ, ಮೇ.09 : ತಾಲೂಕಿನ ಗುಡ್ಡದರಂಗವ್ವನಹಳ್ಳಿ ಗ್ರಾಮದ ಹಟ್ಟಿ ಚಿನ್ನದಗಣಿ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ಅರ್ಧಕ್ಕೆ ಮುರಿದು ಬಿದ್ದು ಮೂರು ದಿನಗಳೇ ಕಳೆದಿದ್ದರೂ, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮದ ಪ್ರಮುಖ ರಸ್ತೆಯ ಬದಿಯಲ್ಲಿರುವ ಈ ವಿದ್ಯುತ್ ಕಂಬವು ತಾಂತ್ರಿಕ ಕಾರಣಗಳಿಂದಲೋ ಅಥವಾ ಗಾಳಿ-ಮಳೆಗೆ ಸಿಲುಕಿಯೋ ಅರ್ಧಕ್ಕೆ ಮುರಿದು ನೇತಾಡುತ್ತಿದೆ. ಈ ರಸ್ತೆಯು ಹಟ್ಟಿ ಚಿನ್ನದಗಣಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಹಾದಿಯಾಗಿದ್ದು, ಸಾರ್ವಜನಿಕರು ಇಲ್ಲಿ ಸಂಚರಿಸುತ್ತಾರೆ. ಕಂಬವು ಅರ್ಧಕ್ಕೆ ಮುರಿದು ಬಿದ್ದಿರುವುದರಿಂದ ಯಾವುದೇ ಕ್ಷಣದಲ್ಲಿ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಅಥವಾ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಭೀತಿ ಎದುರಾಗಿದೆ. ಕಳೆದ ಮೂರು ದಿನಗಳಿಂದ ಈ ಅಪಾಯಕಾರಿ ಸ್ಥಿತಿ ಮುಂದುವರಿದಿದ್ದರೂ, ಬೆಸ್ಕಾಂ (BESCOM) ಸಿಬ್ಬಂದಿಯಾಗಲಿ ಅಥವಾ ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಿ ದುರಸ್ತಿ ಕಾರ್ಯ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಯಾವುದೇ ಪ್ರಾಣಾಪಾಯ ಅಥವಾ ಜೀವಹಾನಿ ಸಂಭವಿಸುವ ಮೊದಲು ಇಲಾಖೆಯ ಮುಖ್ಯಸ್ಥರು ಎಚ್ಚೆತ್ತುಕೊಳ್ಳಬೇಕು. ತಕ್ಷಣವೇ ಈ ಮುರಿದ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ಅಳವಡಿಸಬೇಕು ಎಂದು ಗುಡ್ಡದರಂಗವ್ವನಹಳ್ಳಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

















