ಸುದ್ದಿಒನ್, ಚಿತ್ರದುರ್ಗ, ಜುಲೈ. 24 : ತಾಲ್ಲೂಕಿನ ಮದಕರಿಪುರ ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅಪಹರಣ ಮಾಡಿ, ಬಾಲ್ಯ ವಿವಾಹವಾಗಿ, ಆಕೆಯ ವಿರುದ್ದ ಲೈಂಗಿಕ ದೌರ್ಜನ್ಯ ನಡೆಸಿದ್ದ 27 ವರ್ಷದ ಯುವಕನಿಗೆ ಚಿತ್ರದುರ್ಗ ಜಿಲ್ಲೆಯ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಪೋಕ್ಸೋ) 20 ವರ್ಷ ಕಠಿಣ ಸಜೆ ಮತ್ತು ರೂ.10,000/- ದಂಡ ವಿಧಿಸಿದೆ.
ಮದಕರಿಪುರ ಗ್ರಾಮದ 27 ವರ್ಷದ ವಸಂತಕುಮಾರ್ ಶಿಕ್ಷೆಗೆ ಗುರಿಯಾದ ಆರೋಪಿ. ಜುಲೈ 2020 ರಂದು ಅದೇ ಊರಿನ ಅಪ್ರಾಪ್ತ ವಯಸ್ಸಿನ ಬಾಕಿಯನ್ನು ಬಲವಂತವಾಗಿ ಅಪಹರಣ ಮಾಡಿಕೊಂಡು ಹೋಗಿ, ಬಾಲ್ಯ ವಿವಾಹವಾಗಿ, ಆಕೆಯ ಇಚ್ಛೆಯ ವಿರುದ್ಧವಾಗಿ ಅತ್ಯಾಚಾರ ಮಾಡಿದ್ದನು. ಈ ಬಗ್ಗೆ ಚಿತ್ರದುರ್ಗ ಮಹಿಳಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪೋಲಿಸ್ ಇನ್ಸ್‌ಪೆಕ್ಟರ್‌ರವರಾದ.ಪಿ.ಪ್ರಸಾದ್ ತನಿಖೆಯನ್ನು ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಚಿತ್ರದುರ್ಗ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ (ಪೋಕ್ಸೋ), ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ್ ಅವರು ಆರೋಪಿ ವಸಂತ ಕುಮಾರ್‌ಗೆ 20 ವರ್ಷ ಕಠಿಣ ಸಜೆ ಮತ್ತು ರೂ.10,000/- ದಂಡ ವಿಧಿಸಿ ಇಂದು (ದಿನಾಂಕ:24-7-2026 ರಂದು) ತೀರ್ಪು ನೀಡಿರುತ್ತಾರೆ ಮತ್ತು ಪ್ರಕರಣದ ನೊಂದ ಬಾಲಕಿಗೆ ರೂ.4,00,000/-ಪರಿಹಾರ ನೀಡಲು ಆದೇಶ ನೀಡಿರುತ್ತಾರೆ. ಸರ್ಕಾರದ ಪರವಾಗಿ ವಿಶೇಷ ಅಭಿಯೋಜಕರಾಗಿ ಹೆಚ್.ಆರ್.ಜಗದೀಶ್, ಇವರು ಪಾದ ಮಂಡಿಸಿರುತ್ತಾರೆ.

ಈ ಪ್ರಕರಣ ತನಿಖಾ ಸಹಾಯಕರು ಹಾಗೂ ನ್ಯಾಯಾಲಯದ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಯ ಸೇವೆಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು (ಐ.ಪಿ.ಎಸ್) ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.










