ಬೆಂಗಳೂರು: ಕಳೆದ ವರ್ಷ ಪಠ್ಯ ಪುಸ್ತಕದ ವಿಚಾರವಾಗಿ ಸಾಕಷ್ಟು ಪರ ವಿರೋಧದ ಅಲೆ ಎದ್ದಿತ್ತು. ಜೊತೆಗೆ ಶಾಲೆ ಆರಂಭವಾದ ಮೂರ್ನಾಲ್ಕು ತಿಂಗಳಾದರೂ ಪಠ್ಯ ಪುಸ್ತಕ ಸರಿಯಾದ ಪ್ರಮಾಣದಲ್ಲಿ ಮಕ್ಕಳ ಕೈ ಸೇರಿರಲಿಲ್ಲ. ಈ ಬಾರಿಯ ಪಠ್ಯ ಪುಸ್ತಕದಲ್ಲಿ ಏನಾದರೂ ಬದಲಾವಣೆಯಾಗುತ್ತಾ ಎಂದು ಎಲ್ಲರೂ ಕಾಯುತ್ತಾ ಇದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಕೂಡ ಮಾತನಾಡಿದ್ದು, ಮಕ್ಕಳ ಮನಸ್ಸಿಗೆ ವಿಷ ತುಂಬುವ ಪಠ್ಯಗಳಿಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ಸುಮಾರು 40ಕ್ಕೂ ಹೆಚ್ಚು ಬರಹ, ಸಾಹಿತಿಗಳು ಹಾಗೂ ನಾನಾ ಸಂಘಟನೆಗಳ ಮುಖ್ಯಸ್ಥರ ಜೊತೆಗೆ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಭಯದ ವಾತಾವರಣ ಅಳಿಸಿ ನೆಮ್ಮದಿಯ ವಾತಾವರಣ ಸೃಷ್ಟಿಸಲಾಗುವುದು. ಕನ್ನಡ ನಾಡಿನ ಸೌಹಾರ್ದ ಮತ್ತು ಜಾತ್ಯಾತೀತ ಪರಂಪರೆಯ ರಜ್ಷಣೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಚರ್ಚಿಸಿಕ್ರಮ ಕೈಗೊಳ್ಳಲಾಗುವುದು.
ಈ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾದ ಸಭೆ ಚರ್ಚಿಸಿ ನಿಷ್ಠುರ ತೀರ್ಮಾನ ತೆಗೆದುಕೊಳ್ಳಲಾಗುವುದು. ಸಾಹಿತಿ, ಬರಹಗಾರ, ಕನ್ನಡ ಹೋರಾಟಗಾರರು, ದಲಿತ ಚಳವಳಿಗಳ ಹೋರಾಟಗಾರರು, ರೈತ-ಕಾರ್ಮಿಕರ ಮೇಲೆ ಹಾಕಿದ್ದ ಸುಳ್ಳು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಲಾಗುವುದು. ಮಕ್ಕಳ ಮನಸ್ಸನ್ನು ಕಲುಷಿತಗೊಳಿಸಲು ನಡೆಸಿರುವ ಕೃತ್ಯವನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದಿದ್ದಾರೆ.