ಪ್ರಸಿದ್ಧ ಶ್ರೀಕ್ಷೇತ್ರ ಧರ್ಮಸ್ಥಳನಲ್ಲಿ ಮಂಜುನಾಥ ಸ್ವಾಮಿ ದರ್ಶನ ವೇಳಾಪಟ್ಟಿಯಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ. ಏಪ್ರಿಲ್ ತಿಂಗಳಲ್ಲಿ ನಡೆಯುತ್ತಿರುವ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಕ್ತರಿಗೆ ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ವಿಶೇಷವಾಗಿ ವಿಷು ಜಾತ್ರೆ ಸೇರಿದಂತೆ ದೇವಸ್ಥಾನದಲ್ಲಿ ನಡೆಯುವ ವಿವಿಧ ಆಚರಣೆಗಳ ಹಿನ್ನೆಲೆ, ಇಂದಿನಿಂದ ಏಪ್ರಿಲ್ 22ರವರೆಗೆ ದರ್ಶನ ಸಮಯದಲ್ಲಿ ಬದಲಾವಣೆ ಇರಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಿಸಿದೆ.

ಹೊಸ ವೇಳಾಪಟ್ಟಿಯ ಪ್ರಕಾರ, ಪ್ರತಿದಿನ ಬೆಳಿಗ್ಗೆ 8:30 ನಂತರವೇ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಹಾಗೆಯೇ ರಾತ್ರಿ 8 ಗಂಟೆಯ ಬಳಿಕ ದೇವಸ್ಥಾನದ ಹೊರಾಂಗಣದಿಂದ ಮಾತ್ರ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ.ದೂರದ ಪ್ರದೇಶಗಳಿಂದ ಆಗಮಿಸುವ ಭಕ್ತರು ಈ ಬದಲಾದ ಸಮಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಬೇಕು. ದೇವಸ್ಥಾನದ ನಿಯಮಾವಳಿ ಮತ್ತು ಧಾರ್ಮಿಕ ವಿಧಿವಿಧಾನಗಳು ಸುಗಮವಾಗಿ ನಡೆಯಲು ಭಕ್ತರು ಆಡಳಿತ ಮಂಡಳಿಗೆ ಸಹಕಾರ ನೀಡುವಂತೆ ಮನವಿ ಮಾಡಲಾಗಿದೆ.
















