ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್.30 : ತಾಲ್ಲೂಕಿನ ತಳುಕು ಹೋಬಳಿಯ ಶ್ರೀ ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿಗಳು ತಯಾರಿಸಿದ್ದ ವಿಜ್ಞಾನ ವಸ್ತುಪ್ರದರ್ಶನದ ಮಾದರಿಯು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
ಬೆಂಗಳೂರಿನ ಟಾಟಾ ಪವರ್ ಸೋರ್ಸ್ ಕಂಪನಿಯು ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಉರ್ಜಾ ಮೇಳ, ವಿಜ್ಞಾನ ವಸ್ತುಪ್ರದರ್ಶನ ಹಾಗೂ ಬಿತ್ತಿ ಚಿತ್ರಗಳ ಪ್ರದರ್ಶನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ದೇವರೆಡ್ಡಿ ಹಳ್ಳಿ ಮಾರುತಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಪ್ರೀತಂ ಹಾಗೂ ಪ್ರಿಯಾಂಕ ತಯಾರಿಸಿದ ಸೌರಶಕ್ತಿಯನ್ನು ಬಳಸಿಕೊಂಡು ಯು ಪಿನ್ ಕರ್ವ್ ಗಳಲ್ಲಿ ವಾಹನಗಳ ರಸ್ತೆ ಸುರಕ್ಷತೆಯ ಎಚ್ಚರಿಕೆ ಎಂಬ ಮಾದರಿಯು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಟಾಟಾ ಸೋಲಾರ್ ಉರ್ಜಾ ಮೇಳದಲ್ಲಿ ಈ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ವಿಜ್ಞಾನ ಶಿಕ್ಷಕಿ ಶ್ರೀಮತಿ ಮಮತಾ ದೇವಿ ಬಿ. ಎ ಇವರು ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಅಗಸ್ತ್ಯ ಪೌಂಡೇಶನ್ ಶಿಕ್ಷಕರಾದ ಬಸವೇಶ್ವರ ಕೂಡ ಮಕ್ಕಳಿಗೆ ಮಾರ್ಗದರ್ಶನ ಮಾಡಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆ.ಎಸ್. ಸುರೇಶ್, ಮುಖ್ಯ ಶಿಕ್ಷಕರಾದ ನಾಗರಾಜ್, ವಿದ್ಯಾರ್ಥಿಗಳ ಪೋಷಕರು, ಹಾಗೂ ಊರಿನ ಗ್ರಾಮಸ್ಥರು ಅಭಿನಂದಿಸಿದ್ದಾರೆ.