ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಮೇ. 20 : ನಗರದ ಹೃದಯಭಾಗದಲ್ಲಿರುವ ಗಾಂಧಿ ಭವನದ ಖಾಲಿ ನಿವೇಶನವು ಸದ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕಸದ ತಿಪ್ಪೆಯಾಗಿ ಮಾರ್ಪಟ್ಟಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ನಗರದ ಪ್ರಮುಖ ಕೇಂದ್ರಗಳಾದ ಪೊಲೀಸ್ ಠಾಣೆ, ತಾಲೂಕು ಕಚೇರಿ ಮುಂಭಾಗ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ (BEO) ಕಚೇರಿ ಸಮೀಪದಲ್ಲೇ ಈ ಗಾಂಧಿ ಭವನದ ಖಾಲಿ ನಿವೇಶನವಿದೆ. ಇಂತಹ ಪ್ರಮುಖ ಜಾಗದಲ್ಲಿ ದಿನೇ ದಿನೇ ಕಸದ ರಾಶಿ ಹೆಚ್ಚಾಗುತ್ತಿದ್ದರೂ ನಗರಸಭೆಯಾಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಮದ್ಯದ ಬಾಟಲಿಗಳ ರಾಶಿ!
ಈ ಖಾಲಿ ನಿವೇಶನದಲ್ಲಿ ಪ್ಲಾಸ್ಟಿಕ್ ಪೇಪರ್, ಪ್ಲಾಸ್ಟಿಕ್ ಲೋಟಗಳು, ಕಬ್ಬಿನ ಜಲ್ಲೆಗಳ ತ್ಯಾಜ್ಯ ಮಾತ್ರವಲ್ಲದೆ, ರಾತ್ರಿ ವೇಳೆ ಕಿಡಿಗೇಡಿಗಳು ಕುಡಿದು ಬಿಸಾಡಿರುವ ಬೀರ್ ಬಾಟಲಿಗಳು ಹಾಗೂ ಮದ್ಯದ ಪೌಚ್‌ಗಳು ಎಲ್ಲೆಂದರಲ್ಲಿ ಬಿದ್ದಿರುತ್ತವೆ.
ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ :
ಸುತ್ತಮುತ್ತಲಿನ ಹೋಟೆಲ್‌ಗಳು, ಅಂಗಡಿ ಮುಂಗಟ್ಟುಗಳು ಹಾಗೂ ಕಬ್ಬಿನ ಜ್ಯೂಸ್ ಮಾರಾಟ ಮಾಡುವವರು ತಮ್ಮ ಅಂಗಡಿಯ ಕಸವನ್ನು ತಂದು ಇದೇ ನಿವೇಶನದಲ್ಲಿ ಸುರಿಯುತ್ತಿದ್ದಾರೆ. ಇದಲ್ಲದೆ, ಇದೇ ಜಾಗಕ್ಕೆ ಸಾರ್ವಜನಿಕರು ಶೌಚಾಲಯಕ್ಕಾಗಿ ಬರುತ್ತಿರುವುದರಿಂದ ಇಡೀ ಪ್ರದೇಶವು ದುರ್ನಾತದಿಂದ ಕೂಡಿದೆ. ಈ ರಸ್ತೆಯಲ್ಲಿ ಹಾದುಹೋಗುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ನಗರದ ಅತ್ಯಂತ ಪ್ರಮುಖ ಹಾಗೂ ಆಡಳಿತಾತ್ಮಕ ಕಚೇರಿಗಳಿರುವ ಜಾಗದಲ್ಲೇ ಇಷ್ಟೊಂದು ಗಲೀಜು ತುಂಬಿದ್ದರೂ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಜಾಗವನ್ನು ಸ್ವಚ್ಛಗೊಳಿಸಿ, ಕಸ ಹಾಕುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.









