Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ: ಖಾಸಗಿ ಶಾಲೆ ವಾಹನಗಳ ಮೇಲೆ ಕನ್ನಡ ಬಳಕೆಗೆ ಮನವಿ

---Advertisement---

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಅಕ್ಟೋಬರ್. 31 : ಖಾಸಗಿ ಶಾಲೆಗಳ ವಾಹನಗಳ ಮೇಲೆ ಕನ್ನಡದಲ್ಲಿ ಹೆಸರು ಬರೆಸಲು ಕ್ರಮ ವಹಿಸದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಆಡಳಿತ ನಿರ್ಲಕ್ಷ್ಯ ಖಂಡಿಸಿ ಶುಕ್ರವಾರ ಕೊರ‍್ಲಕುಂಟೆ ಗ್ರಾಮದ ಕನ್ನಡ ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ ಮತ್ತು ವಿವಿಧ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ ಬಿಇಒ ಕೆ.ಎಸ್. ಸುರೇಶ್ ಅವರಿಗೆ ಮನವಿ ಸಲ್ಲಿಸಿದರು.

ಸಂಸ್ಥೆ ಅಧ್ಯಕ್ಷ ಕೊರ‍್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಖಾಸಗಿ ಶಾಲೆಗಳ ವಾಹನಗಳ ಮೇಲೆ ಶಾಲಾ ಹೆಸರುಗಳು ಆಂಗ್ಲಭಾಷೆಯಲ್ಲಿ ರಾರಾಜಿಸುತ್ತಿವೆ. ಖಾಸಗಿ ಶಾಲೆಗಳಲ್ಲಿ ಆಯೋಜನೆ ಮಾಡುವ ಕಾರ್ಯಕ್ರಮಗಳ ಆಹ್ವಾನ ಪತ್ರಿಕೆಗಳನ್ನು ಆಂಗ್ಲ ಭಾಷೆಯಲ್ಲಿ ಮುದ್ರಿಸಲಾಗುತ್ತದೆ. ಕಾರ್ಯಕ್ರಮಗಳ ನಿರೂಪಣೆಯೂ ಆಂಗ್ಲಭಾಷೆಯಲ್ಲಿ ನಡೆಸುತ್ತಾರೆ. ಕನ್ನಡ ಭಾಷೆಯಲ್ಲಿ ಮಾತನಾಡುವ ಮಕ್ಕಳ ಪಾಲಕರನ್ನು ಅವಮಾನದ ರೀತಿಯಲ್ಲಿ ಕಾಣಲಾಗುತ್ತದೆ. ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮನವಿ ಸಲ್ಲಿಸಲಾಗಿತ್ತು. ಇದುವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಈ ರೀತಿಯ ನಿರ್ಲಕ್ಷ್ಯ ಮಾಡುವ ಅಧಿಕಾರಿಗಳಿಂದ 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ರಕ್ಷಣೆ ಮಾಡಿಕೊಳ್ಳಲು ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೇತಾಜಿ ಸ್ನೇಹ ಬಳಗ ಅಧ್ಯಕ್ಷ ಆರ್. ಪ್ರಸನ್ನ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಬೇಕಿದೆ. ಖಾಸಗಿ ಶಾಲೆಗಳು ಆಂಗ್ಲ ಭಾಷೆಯ ವಿರೋಧಿಯಾಗಿ ನಡೆದುಕೊಳ್ಳುತ್ತಿವೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ನಿಯಂತ್ರಣ ಮಾಡಬೇಕು. ಶಾಲಾ ವಾಹನಗಳ ಮೇಲೆ ಕನ್ನಡದಲ್ಲಿ ಹೆಸರು ಬರೆಸಲು ನೋಟೀಸ್ ಜಾರಿ ಮಾಡಿದ್ದರೂ, ಖಾಸಗಿ ಶಾಲೆಗಳು ಸ್ಪಂದಿಸಿಲ್ಲ. ಇಂತಹ ಶಾಲೆಗಳ ವಿರುದ್ಧ ಸರ್ಕಾರಕ್ಕೆ ವರದಿ ಮಾಡಬೇಕು. ಪ್ರತಿ ಶಾಲೆಗೂ ಭೇಟಿ ನೀಡುವ ಮೂಲಕ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡುವಂತೆ ಕ್ರಮ ವಹಿಸಬೇಕು. ಇಲ್ಲದಿದ್ದಲ್ಲೀ ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ನಿರಂತರ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಬಿಇಒ ಕೆ.ಎಸ್. ಸುರೇಶ್ ಈಗಾಗಲೇ ಖಾಸಗಿ ಶಾಲೆಗಳಿಗೆ ನೋಟೀಸ್ ನೀಡಲಾಗಿತ್ತು. ಆದರೂ, ನಿರ್ಲಕ್ಷ್ಯ ಮಾಡಲಾಗಿದೆ. ಕೂಡಲೇ ನೋಟೀಸ್ ಜಾರಿ ಮಾಡಿ ಕ್ರಮ ವಹಿಸಲಾಗುವುದು. ಒಂದು ವಾರದ ಒಳಗೆ ಪ್ರತಿ ಶಾಲೆಗಳ ಕಟ್ಟಡ ಮತ್ತು ವಾಹನಗಳ ಮೇಲೆ ಕನ್ನಡದಲ್ಲಿ ಹೆಸರು ಬರೆಯಿಸಿ, ಫೋಟೋ ಸಹಿತ ಕನ್ನಡ ಪರ ಸಂಘಟನೆಗಳಿಗೆ ಮಾಹಿತಿ ನೀಡಲಾಗುವುದು ಎಂದು ಭರವಸೆ ನೀಡಿದರು.

ಬುದ್ಧ ವೇದಿಕೆ ಅಧ್ಯಕ್ಷ ಮೈತ್ರಿ ದ್ಯಾಮಯ್ಯ, ಪಗಡಲಬಂಡೆ ನಾಗೇಂದ್ರಪ್ಪ, ಬಿ. ಮೂರ್ತಿ, ಎಚ್. ಲಂಕಪ್ಪ, ನಗರಂಗೆರೆ ಬಾಬು, ಎಸ್. ರವಿಕುಮಾರ್, ಬಿ. ಪಾಪಣ್ಣ, ಹೊರಕೆರೆ ರಂಗಸ್ವಾಮಿ, ಆರ್. ರವಿವರ್ಮ, ಮಲ್ಲಿಕಾರ್ಜುನ, ಎಂ.ಎಚ್. ಸ್ವಾಮಿ, ಎನ್. ಕುಶ ಮತ್ತಿತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now