ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ : ಕಳೆದ 75 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಸರ್ಕಾರ ಮೂಗಿಗೆ ತುಪ್ಪ ಸವರುವ ರೀತಿಯಲ್ಲಿ ಬಜೆಟ್ ಮಂಡಿಸುತ್ತಿತ್ತು. ಅದೇ ನಮ್ಮ ದೇಶದ ಪ್ರಧಾನಿ ನರೇಂದ್ರಮೋದಿರವರು ಆತ್ಮನಿರ್ಭರ ಭಾರತದ ಪರಿಕಲ್ಪನೆಯಿಟ್ಟುಕೊಂಡು ಜನಪರ ಬಜೆಟ್ ಮಂಡಿಸಿದ್ದಾರೆಂದು ಬಿಜೆಪಿ ಜಿಲ್ಲಾ ಸಂಚಾಲಕ ಹಾಗೂ ಹೊಳಲ್ಕೆರೆ ಉಸ್ತುವಾರಿ ಜಿ.ಎಂ.ಅನಿತ್‌ಕುಮಾರ್ ಹರ್ಷ ವ್ಯಕ್ತಪಡಿಸಿದರು.
ದೆಹಲಿಯ ಅಂಬೇಡ್ಕರ್ ಭವನದಲ್ಲಿ ಪ್ರಧಾನಿ ಮೋದಿರವರು ಬುಧವಾರ ಬಜೆಟ್ ಭಾಷಣ ಮಾಡಿದ್ದನ್ನು ರಾಜ್ಯದ ಸೂಚನೆಯಂತೆ ಪ್ರತಿ ಮಂಡಲದಲ್ಲಿ ಹೊಳಲ್ಕೆರೆ ಮಂಡಲ ವತಿಯಿಂದ ಶಕ್ತಿ ಕೇಂದ್ರವಾದ ತಾಳ್ಯದ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಲ್.ಇ.ಡಿ.ಪರದೆಯ ಮೂಲಕ ನೇರ ಪ್ರಸಾರದ ಭಾಷಣ ವೀಕ್ಷಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ಜನಪ್ರಿಯವಲ್ಲ. ಇದು ಜನಪರ ಬಜೆಟ್. ದೂರದೃಷ್ಟಿ, ಸ್ವಾವಲಂಬನೆ, ಆತ್ಮನಿರ್ಭರ, ಆರ್ಥಿಕತೆ, ಮೂಲಸೌಕರ್ಯ, ಸರ್ಕಾರಿ ವ್ಯವಸ್ಥೆ, ಕ್ರಿಯಾಶೀಲ ಜನಸಂಖ್ಯೆ ಬೇಡಿಕೆ ಈ ಐದು ಅಂಶಗಳನ್ನು ಬಜೆಟ್ ಭಾಷಣೆ ಒಳಗೊಂಡಿದೆ.
ಡಿಜಿಟಲ್ ಆಧಾರಿತ ಆರ್ಥಿಕತೆ, ಕೌಶಲ್ಯಾಭಿವೃದ್ದಿಗೆ ಆನ್‌ಲೈನ್ ತರಗತಿ, ಸರ್ಕಾರಿ ಶಾಲೆಗಳ ಮಕ್ಕಳಿಗೆ ಒನ್ ಕ್ಲಾಸ್, ಕಾವೇರಿ ನದಿ ಸೇರಿ ಐದು ನದಿಗಳ ಜೋಡಣೆ, ಹರ್‌ಘರ್ ನಲ್‌ಜಲ್ ಯೋಜನೆ, ರಾಸಾಯನಿಕ ಮುಕ್ತ ಸಾವಯವ ಕೃಷಿಗೆ ಉತ್ತೇಜನ, ಕೃಷಿ ಕ್ಷೇತ್ರದಲ್ಲಿ ಡ್ರೋನ್ ಬಳಕೆಗೆ ಪ್ರೋತ್ಸಾಹ, ನಬಾರ್ಡ್ ಮೂಲಕ ಕೃಷಿ ರಂಗದ ಸ್ಟಾರ್ಟ್ ಅಪ್‌ಗಳಿಗೆ ಹಣಕಾಸು ನೆರವು ನೀಡಲು ನಿರ್ಧಾರ, ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರಕ್ಕೆ ಒತ್ತು ಬಜೆಟ್‌ನಲ್ಲಿ ಪ್ರಮುಖ ಅಂಶಗಳಾಗಿವೆ ಎಂದರು.
ಹರ್‌ಘಲ್ ನಲ್‌ಜಲ್ ಯೋಜನೆಯಡಿ ಹನ್ನೆರಡು ಕೋಟಿ ಮನೆಗಳಿಗೆ ನೀರು ಪೂರೈಕೆಗೆ 60 ಸಾವಿರ ಕೋಟಿ ರೂ.ಮೀಸಲು, ಎರಡು ವರ್ಷದಲ್ಲಿ 5.5 ಕೋಟಿ ಮನೆಗಳಿಗೆ ನೀರು ಪೂರೈಕೆ, 2022-23 ರಲ್ಲಿ 3.8 ಕೋಟಿ ಮನೆಗಳಿಗೆ ನೀರಿನ ವ್ಯವಸ್ಥೆ ಮಾಡುವುದು ಬಜೆಟ್‌ನ ಉದ್ದೇಶ. 2023 ರ ವೇಳೆಗೆ 18 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, ಗಡಿ ಪ್ರದೇಶದ ಗ್ರಾಮಗಳ ಅಭಿವೃದ್ದಿಗೆ ಒತ್ತು. ಮೂಲಸೌಲಭ್ಯ, ಪ್ರವಾಸೋದ್ಯಮ ಕೇಂದ್ರಗಳ ಸ್ಥಾಪನೆ, ಪೋಸ್ಟ್ ಆಫೀಸ್‌ಗಳಿಗೆ ಬ್ಯಾಂಕ್ ಸ್ವರೂಪ ನೀಡಲಾಗುವುದು.
ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಗೆ ಒತ್ತು, ಬ್ಯಾಟರಿ ಬದಲಾವಣೆಗೆ ಒತ್ತು, ಒನ್ ನೇಷನ್, ಒನ್ ರಿಜಿಸ್ಟ್ರೇಷನ್, ಜಮೀನು ದಾಖಲೆಗಳ ಡಿಜಿಟಲೀಕರಣಕ್ಕೆ ಆದ್ಯತೆ, ಎಂಟು ಭಾಷೆಗಳಲ್ಲಿ ಜಮೀನು ದಾಖಲೆಗಳ ಡಿಜಿಟಲೀಕರಣ, 2022 ರಲ್ಲೆ 5 ಜಿ. ತರಂಗಾಂತರ ಹರಾಜು, ಐದು ಜಿ.ಗೆ ಅಗತ್ಯ ಮೂಲಸೌಲಭ್ಯ ಒದಗಿಸಿ ಐದು ಜಿ.ಸಂಬಂಧಿತ ವಸ್ತುಗಳ ಉತ್ಪಾದನೆಗೆ ಪ್ರೋತ್ಸಾಹ ಧನವನ್ನು ಬಜೆಟ್‌ನಲ್ಲಿ ಮೀಸಲಿರಿಸಲಾಗಿದೆ ಎಂದು ತಿಳಿಸಿದರು.
ದೂರ ಸಂಪರ್ಕ ಕ್ಷೇತ್ರದಲ್ಲಿ ಮಹತ್ತರ ಕ್ರಾಂತಿ, ಪ್ರತಿಯೊಂದು ಗ್ರಾಮಕ್ಕೂ ಆಪ್ಟಿಕಲ್ ಫೈಬರ್ ಮೂಲಕ ಇಂಟರ್‌ನೆಟ್ ವ್ಯವಸ್ಥೆ, 2025 ರೊಳಗೆ ಪ್ರತಿ ಗ್ರಾಮಕ್ಕೂ ಇಂಟರ್‌ನೆಟ್ ಸೌಲಭ್ಯ ಒದಗಿಸಲಾಗುವುದು. ರಕ್ಷಣಾ ಇಲಾಖೆಯಲ್ಲಿ ಆತ್ಮನಿರ್ಭರಕ್ಕೆ ಒತ್ತು, ರಕ್ಷಣಾ ಸಾಮಾಗ್ರಿ ಖರೀಧಿಯಲ್ಲಿ ಶೇ.68 ರಷ್ಟು ಸ್ಥಳೀಯ ಸಾಮಾಗ್ರಿ ಖರೀದಿ ಕಡ್ಡಾಯಗೊಳಿಸಿ ಪರ್ಸೆಂಟೇಜ್ ವ್ಯವಹಾರಕ್ಕೆ ಕಡಿವಾಣ, ರಕ್ಷಣಾ ಬಜೆಟ್‌ನ ಶೇ.35 ರಷ್ಟು ಅನುದಾನ ಸಂಶೋಧನೆಗೆ ಮೀಸಲು, ರಕ್ಷಣಾ ಇಲಾಖೆಯಲ್ಲಿ ಖರೀಧಿ ಮತ್ತು ಖಾಸಗಿ ಸಹಭಾಗಿತ್ವ, ಸೋಲಾರ್ ವಿದ್ಯುತ್ ಉತ್ಪಾದನೆಗೆ 19,500 ಕೋಟಿ ರೂ. ಎಸ್ಸಿ, ಎಸ್ಟಿ ಮತ್ತು ರೈತರಿಗೆ ಆರ್ಥಿಕ ನೆರವು, ಕನಿಷ್ಟ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯ ಖರೀಧಿಸಲು ರೂ.2.37 ಲಕ್ಷ ಕೋಟಿ ಮೀಸಲು.
ಇಂಧನ ಕ್ಷೇತ್ರದಲ್ಲಿ ಖಾಸಗಿ ಬಂಡವಾಳ ಹೂಡಿಕೆಗೆ ಅವಕಾಶ. ರೂ.7.5 ಲಕ್ಷ ಕೋಟಿ ಬಂಡವಾಳ ಹೂಡಿಕೆಗೆ ಕೇಂದ್ರದ ನಿರ್ಧಾರ. ಉದ್ಯೋಗ ಸೃಷ್ಟಿಯಲ್ಲಿ ಬಂಡವಾಳ ಹೂಡಿಕೆಯಿಂದ ಸಹಾಯ ಇವುಗಳು ಬಜೆಟ್‌ನ ಪ್ರಮುಖ ಅಂಶಗಳು. ಇವೆಲ್ಲಾ ನಮ್ಮ ದೇಶದ ಪ್ರಧಾನಿ ಮೋದಿರವರು ಭಾರತವನ್ನು ಇನ್ನು 25 ವರ್ಷದೊಳಗೆ ಬಲಿಷ್ಟ ದೇಶವನ್ನಾಗಿಸುವ ಪರಿಕಲ್ಪನೆಯುಳ್ಳ ಬಜೆಟ್ ಘೋಷಿಸಿದ್ದಾರೆಂದು ತಿಳಿಸಿದರು.
ಕೇಂದ್ರ ಸರ್ಕಾರದ ಬಜೆಟ್‌ನ ಪ್ರಮುಖ ವಿಚಾರಗಳನ್ನು ಬೂತ್ ಕಮಿಟಿ ಸದಸ್ಯರು, ಶಕ್ತಿ ಕೇಂದ್ರದ ಪ್ರಮುಖರು, ಮಹಾಶಕ್ತಿ ಕೇಂದ್ರದ ಪ್ರಮುಖರು, ಮಂಡಲ ಸಮಿತಿಯ ಪದಾಧಿಕಾರಿಗಳು ಮನೆ ಮನೆಗೆ ಮುಟ್ಟಿಸಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವಂತೆ ತಾಕೀತು ಮಾಡಿದರು.
ಹೊಳಲ್ಕೆರೆ ಉಸ್ತುವಾರಿ ಹಾಗೂ ಮಾಧ್ಯಮ ವಕ್ತಾರ ದಗ್ಗೆಶಿವಪ್ರಕಾಶ್, ಮಂಡಲ ಪ್ರಧಾನ ಕಾರ್ಯದರ್ಶಿ ರೂಪ ಸುರೇಶ್, ಮಂಡಲ ಉಪಾಧ್ಯಕ್ಷ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ್, ನುಲೇನೂರು ಅರುಣ್ ಸೇರಿದಂತೆ ಇನ್ನು ಅನೇಕ ಪದಾಧಿಕಾರಿಗಳು, ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.