ನವದೆಹಲಿ : ಪೆಟ್ರೋಲಿಯಂ ಕಂಪನಿಗಳು ಮಾರ್ಚ್ ತಿಂಗಳ ಮೊದಲ ದಿನವೇ ಭಾರೀ ಶಾಕ್ ನೀಡಿವೆ. ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಸೇರಿದಂತೆ ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್‌ಗಳ ಬೆಲೆಯೂ ಏರಿಕೆಯಾಗಿದೆ.
ಹೆಚ್ಚಿದ ಬೆಲೆಗಳು ಇಂದಿನಿಂದ ಜಾರಿಗೆ ಬರಲಿವೆ. ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 50ರಷ್ಟು ಹೆಚ್ಚಿಸಲಾಗಿದೆ. ಇದರಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 1103 ತಲುಪಿದೆ.
ಇದುವರೆಗೆ 14.2 ಕೆ.ಜಿ.ಗೆ 1053 ರೂ.ಗಳಷ್ಟಿತ್ತು.
ಮುಂಬೈನಲ್ಲಿ ಗ್ಯಾಸ್ ಸಿಲಿಂಡರ್ ದರ ರೂ.1052.50ರಿಂದ ರೂ.1102.50ಕ್ಕೆ ಏರಿಕೆಯಾಗಿದೆ. ಕೋಲ್ಕತ್ತಾದಲ್ಲಿ ರೂ. 1129 ಶುಲ್ಕ ವಿಧಿಸಲಾಗುತ್ತದೆ. ಅದೇ ಚೆನ್ನೈನಲ್ಲಿ 1118.50 ರೂ.ಗೆ ತಲುಪಿದೆ.
ವಾಣಿಜ್ಯ ಸಿಲಿಂಡರ್ ಬೆಲೆ 19 ಕೆಜಿಗೆ 350.50 ರೂ. ಹೆಚ್ಚಾಗಿದೆ. ಇದರೊಂದಿಗೆ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ 2119.50 ರೂ.ಗೆ ಏರಿಕೆಯಾಗಿದೆ. ಈ ಮೊದಲು ರೂ.1769 ಇತ್ತು.
ಹಾಗೂ ಕೋಲ್ಕತ್ತಾದಲ್ಲಿ ರೂ.1870ರಿಂದ ರೂ.2221.50ಕ್ಕೆ ಏರಿಕೆಯಾಗಿದೆ. ಮುಂಬೈನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ ದರ 2071.50 ರೂ.ಗೆ ತಲುಪಿದೆ. ಚೆನ್ನೈನಲ್ಲಿ ರೂ.2268 ತಲುಪಿದೆ.
ಈ ಏರಿಕೆ ದರಗಳು ಮಾರ್ಚ್ 1 ರಿಂದ ಜಾರಿಗೆ ಬರಲಿದೆ ಎಂದು ಪೆಟ್ರೋಲಿಯಂ ಕಂಪನಿಗಳು ಘೋಷಿಸಿವೆ. ಈಗಾಗಲೇ ಅಗತ್ಯ ವಸ್ತುಗಳ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಜೇಬಿಗೆ ಮತ್ತೆ ಕತ್ತರಿ ಬಿದ್ದಂತಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಇನ್ನಷ್ಟು ಹೊರೆಯಾಗಲಿದೆ.