ಬೆಂಗಳೂರು ಜೂನ್.23: ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ರಾಜ್ಯದ ಯುವಜನತೆಗೆ ಕಂದಾಯ ಇಲಾಖೆಯು ಭರ್ಜರಿ ಸಿಹಿಸುದ್ದಿ ನೀಡಿದೆ. ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 572 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಹಣಕಾಸು ಇಲಾಖೆ ಹಸಿರು ನಿಶಾನೆ ತೋರಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ರೋಸ್ಟರ್ ನಿಯಮಾವಳಿ ಹಾಗೂ ಮೀಸಲಾತಿ ಅನ್ವಯವೇ ಈ ಬೃಹತ್ ನೇಮಕಾತಿ ಪ್ರಕ್ರಿಯೆ ನಡೆಯಲಿದ್ದು, ಇದಕ್ಕೆ ಸಂಬಂಧಿಸಿದ ಜಿಲ್ಲಾವಾರು ಹುದ್ದೆಗಳ ಹಂಚಿಕೆಯ ಸಂಪೂರ್ಣ ವಿವರಗಳು ಈಗ ಹೊರಬಿದ್ದಿವೆ.
ತುಮಕೂರು ಮತ್ತು ಮಂಡ್ಯ ಜಿಲ್ಲೆಗಳು ತಲಾ 50 ಹುದ್ದೆಗಳು,ಬೆಳಗಾವಿ ಜಿಲ್ಲೆಗೆ 48 ಹಾಗೂ ಮೈಸೂರು ಜಿಲ್ಲೆಗೆ 45 ಹುದ್ದೆಗಳನ್ನು ನಿಗದಿಪಡಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ 37 ಹುದ್ದೆಗಳಿದ್ದರೆ, ಹಾಸನ ಮತ್ತು ಕಲಬುರಗಿ ಜಿಲ್ಲೆಗಳಿಗೆ ತಲಾ 35 ಸ್ಥಾನಗಳನ್ನು ಹಂಚಿಕೆ ಮಾಡಲಾಗಿದೆ. ಚಾಮರಾಜನಗರದಲ್ಲಿ 31, ಬೆಂಗಳೂರು ದಕ್ಷಿಣ (ರಾಮನಗರ ವ್ಯಾಪ್ತಿ) ಭಾಗದಲ್ಲಿ 30 ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 29 ಹುದ್ದೆಗಳು ಲಭ್ಯ ಇವೆ. ಕೋಲಾರಕ್ಕೆ 22, ಚಿಕ್ಕಬಳ್ಳಾಪುರಕ್ಕೆ 21 ಹಾಗೂ ರಾಜಧಾನಿ ಬೆಂಗಳೂರು ನಗರ ಜಿಲ್ಲೆಗೆ 20 ಹುದ್ದೆಗಳನ್ನು ನೀಡಲಾಗಿದೆ.
ಮಲೆನಾಡು ಭಾಗದ ಶಿವಮೊಗ್ಗಕ್ಕೆ 18 ಹುದ್ದೆಗಳು ಸಿಕ್ಕರೆ, ಉತ್ತರ ಕರ್ನಾಟಕದ ಬಾಗಲಕೋಟೆ ಮತ್ತು ಬೀದರ್ ಜಿಲ್ಲೆಗಳಿಗೆ ತಲಾ 16 ಹುದ್ದೆಗಳು ಸಿಕ್ಕಿವೆ. ಚಿತ್ರದುರ್ಗ ಹಾಗೂ ಹಾವೇರಿ ಜಿಲ್ಲೆಗಳಿಗೆ ತಲಾ 15 ಸ್ಥಾನಗಳು ದಕ್ಕಿದ್ದು, ಗದಗ ಜಿಲ್ಲೆಗೆ 14 ಹುದ್ದೆಗಳನ್ನು ಮೀಸಲಿಡಲಾಗಿದೆ.ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ತಲಾ 10 ಹುದ್ದೆಗಳು ಮಾತ್ರ ಸಿಕ್ಕಿವೆ. ಇನ್ನುಳಿದಂತೆ ಇಡೀ ರಾಜ್ಯದಲ್ಲೇ ಅತ್ಯಂತ ಕನಿಷ್ಠ ಪ್ರಮಾಣದ ಅಂದರೆ ಕೇವಲ 5 ಹುದ್ದೆಗಳು ರಾಯಚೂರು ಜಿಲ್ಲೆಯ ಪಾಲಾಗಿವೆ.
ಈ ನೇಮಕಾತಿ ಪ್ರಕ್ರಿಯೆಯನ್ನು ವಿಳಂಬ ಮಾಡದೆ ಅತ್ಯಂತ ವೇಗವಾಗಿ ಮುಗಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಕಂದಾಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಯವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದ್ದಾರೆ.
ನಿಗದಿತ ‘ನಮೂನೆ-6’ ರ ಅಡಿಯಲ್ಲಿ ಹೊಸ ರೋಸ್ಟರ್ ಬಿಂದುಗಳು ಮತ್ತು ಮೀಸಲಾತಿಯ ಪೂರ್ಣ ವಿವರಗಳನ್ನೊಳಗೊಂಡ ವರದಿಯನ್ನು ತಕ್ಷಣವೇ ಸಿದ್ಧಪಡಿಸಿ ಕಳುಹಿಸುವಂತೆ ಡೆಡ್‌ಲೈನ್ ವಿಧಿಸಲಾಗಿದೆ. ಎಲ್ಲಾ ಜಿಲ್ಲಾಡಳಿತಗಳಿಂದ ಈ ಮಾಹಿತಿ ಕೈಸೇರುತ್ತಿದ್ದಂತೆಯೇ, ಕಂದಾಯ ಇಲಾಖೆಯು ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ.















