ಹೈದರಾಬಾದ್ : ಟಾಲಿವುಡ್ನ ಖ್ಯಾತ ಹಿರಿಯ ನಟ ಗಿರಿಬಾಬು ಅವರು ವಿಧಿವಶರಾಗಿದ್ದಾರೆ. ಕೆಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಸುಮಾರು 600ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಗಿರಿಬಾಬು, ನಾಯಕನಾಗಿ, ಪೋಷಕ ನಟನಾಗಿ, ಖಳನಾಯಕನಾಗಿ ಹಾಗೂ ಹಾಸ್ಯನಟನಾಗಿ ಎಲ್ಲಾ ರೀತಿಯ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಗೆದ್ದಿದ್ದರು.
ಟಾಲಿವುಡ್ನಲ್ಲಿ ಹಿರಿಯ ನಟರಾಗಿ ತಮ್ಮದೇ ಆದ ವಿಶೇಷ ಗುರುತನ್ನು ಗಿರಿಬಾಬು ಹೊಂದಿದ್ದರು. ನೂರಾರು ಸಿನಿಮಾಗಳಲ್ಲಿ ಬಣ್ಣಹಚ್ಚಿದ ಅವರು, ಹಾಸ್ಯನಟನಾಗಿ ಪ್ರೇಕ್ಷಕರನ್ನು ನಗಿಸುವ ಜೊತೆಗೆ, ಖಳನಾಯಕನ ಪಾತ್ರಗಳಲ್ಲೂ ತಮ್ಮ ಅಮೋಘ ನಟನೆಯಿಂದ ಮೆಚ್ಚುಗೆ ಗಳಿಸಿದ್ದರು. ನಾಯಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದ ಗಿರಿಬಾಬು, ಆ ನಂತರ ಬಂದ ಅವಕಾಶಗಳನ್ನು ಬಳಸಿಕೊಂಡು ಪೋಷಕ ನಟನಾಗಿ ಬದಲಾಗಿ, ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಬೆಳೆದರು.
ವೃತ್ತಿಜೀವನದ ಆರಂಭದಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿದರೂ, ನಿರೀಕ್ಷಿತ ಮಟ್ಟದಲ್ಲಿ ಅವಕಾಶಗಳು ಬಾರದ ಕಾರಣ ಗಿರಿಬಾಬು ಪೋಷಕ ಪಾತ್ರಗಳತ್ತ ಮುಖ ಮಾಡಿದರು. ಆ ಬಳಿಕ ಅವರಿಗೆ ಸಾಲು ಸಾಲು ಅವಕಾಶಗಳು ಒಲಿದುಬಂದವು. ಒಂದು ಕಾಲದಲ್ಲಿ ಗಿರಿಬಾಬು ಅವರ ದಿನಾಂಕಗಳಿಗಾಗಿ ನಿರ್ದೇಶಕರು ಹಾಗೂ ನಿರ್ಮಾಪಕರು ಕಾಯುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ವರ್ಷಕ್ಕೆ ಬರೋಬ್ಬರಿ 15 ರಿಂದ 20 ಸಿನಿಮಾಗಳಲ್ಲಿ ನಟಿಸುವಷ್ಟು ಅವರು ಬ್ಯುಸಿಯಾಗಿದ್ದರು. ಕೇವಲ ಸಣ್ಣಪುಟ್ಟ ಪಾತ್ರಗಳಷ್ಟೇ ಅಲ್ಲದೆ, ಸದಾ ನೆನಪಿನಲ್ಲಿ ಉಳಿಯುವಂತಹ ಅತ್ಯುತ್ತಮ ಪಾತ್ರಗಳು ಅವರಿಗೆ ಒಲಿದಿದ್ದವು.
ಗಿರಿಬಾಬು ಅವರು ಕೇವಲ ನಟನಾಗಿ ಮಾತ್ರವಲ್ಲದೆ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಚಿತ್ರರಂಗದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದರು. ವಯಸ್ಸಾದರೂ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರಿಸಿದ್ದ ಅವರು, ಕೊನೆಯದಾಗಿ ‘ಅನ್ನಿ ಮಂಚಿ ಶಕುನಮುಲೆ’ ಎಂಬ ಸಿನಿಮಾದಲ್ಲಿ ನ್ಯಾಯಾಧೀಶರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.











